ಉಡುಪಿ, ಮಾ. 30 (DaijiworldNews/TA): ಜಿಲ್ಲೆಯಾದ್ಯಂತ ಸರಾಸರಿ 14.49ಮಿ.ಮೀ. ಮಳೆಯಾಗಿದ್ದು, ಗುಡುಗು ಸಹಿತ ಗಾಳಿಮಳೆಯಿಂದ ಕೆಲವು ಕಡೆ ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಕಾರ್ಕಳ ತಾಲೂಕಿನಲ್ಲಿ 7.08 ಮಿ.ಮೀ., ಕುಂದಾಪುರ-29.6ಮಿ.ಮೀ.,, ಉಡುಪಿ-21.2ಮಿ.ಮೀ., ಬೈಂದೂರು -1.3ಮಿ.ಮೀ., ಬ್ರಹ್ಮಾವರ-16.5 ಮಿ.ಮೀ., ಕಾಪು-9.1ಮಿ.ಮೀ., ಹೆಬ್ರಿ-16.7ಮಿ.ಮೀ. ಮಳೆಯಾ ಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯಿಂದಾಗಿ ಕುಂದಾಪುರ ತಾಲೂಕಿನ ಗಂಗೊಳ್ಳಿ ಶಾಹಿ ಮೊಹಲ್ಲಾದ ಆಯಶಾಬಿ ಎಂಬವರ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿಯಾಗಿ ಸುಮಾರು 30,000ರೂ. ಹಾಗೂ ಆಲೂರು ಗ್ರಾಮದ ಸುಶೀಲಾ ಎಂಬವರ ಕೊಟ್ಟಿಗೆ ಮೇಲೆ ಮರಬಿದ್ದು ಹಾನಿಯಾಗಿ 20,000 ರೂ. ನಷ್ಟ ಉಂಟಾಗಿದೆ ಎಂದು ವರದಿಯಾಗಿದೆ.
ಚಲಿಸುತ್ತಿದ್ದ ರಿಕ್ಷಾಕ್ಕೆ ಸಿಡಿಲು ಬಡಿದ ಘಟನೆ ಪರ್ಕಳ ಪರೀಕ ಸಮೀಪ ಶನಿವಾರ ಸಂಜೆ ವೇಳೆ ನಡೆದಿದೆ. ಪರ್ಕಳದ ಆಟೋ ಚಾಲಕ ಮಹಮ್ಮದ್ ಪರೀಕದಿಂದ ಮಣಿಪಾಲದ ಕಡೆಗೆ ಬಾಡಿಗೆಗೆ ಹೋಗುತ್ತಿದ್ದಾಗ ರಿಕ್ಷಾಕ್ಕೆ ಸಿಡಿಲು ಬಡಿಯಿತ್ತೆನ್ನಲಾಗಿದೆ. ಇದರಿಂದ ರಿಕ್ಷಾದಲ್ಲಿ ಅಳವಡಿಸಲಾದ ಫ್ಯಾನ್ ಸಂಪೂರ್ಣ ಸ್ತಬ್ಧಗೊಂಡಿದೆ. ಸಿಎನ್ಜಿ ರಿಕ್ಷಾ ಆಗಿದ್ದರಿಂದ ಚಾಲಕ ಭಯದಿಂದ ರಿಕ್ಷಾವನ್ನು ಅಲ್ಲೇ ನಿಲ್ಲಿಸಿ ಹೊರಗಡೆ ಓಡಿ ಬಂದಿದ್ದಾರೆ. ಅದೇ ರೀತಿ ಪರ್ಕಳದ ಮೆಸ್ಕಾಂ ಕಚೇರಿಯ ಇನ್ವಟರ್ ಸಿಸ್ಟಂಗೂ ಸಿಡಿಲು ಬಡಿದಿದ್ದು, ಇದರಿಂದ ಹಾನಿ ಉಂಟಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.