ಬಂಟ್ವಾಳ, ಮಾ. 30 (DaijiworldNews/TA): ನಿಲ್ಲಿಸಿದ್ದ ಸ್ಕೂಟರ್ಗೆ ಹಿಂಬದಿಯಿಂದ ಕೆ.ಎಸ್ ಆರ್ಟಿಸಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರು ಗಾಯಗೊಂಡ ಘಟನೆ ಬಂಟ್ವಾಳ - ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಂಜಾಲಕಟ್ಟೆ ಬಸವನಗುಡಿ ಎಂಬಲ್ಲಿ ಸಂಭವಿಸಿದೆ.

ಸ್ಕೂಟರ್ ಸವಾರರಾದ ಬಡಗಕಜೆಕಾರು ಅಂಚೆ ಕಚೇರಿ ತಾತ್ಕಾಲಿಕ ಪೋಸ್ಟ್ ಮಾಸ್ಟರ್, ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ನಿವಾಸಿ ಶ್ರೇಯಸ್ ಹಾಗೂ ಸಹೋದ್ಯೋಗಿ ಶಾಲಿನಿ ಗಾಯಗೊಂಡಿದ್ದು, ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೇಯಸ್ ಅವರು ಅಂಚೆ ಇಲಾಖೆಯ ಕೆಲಸದ ನಿಮಿತ್ತ ಕೇಂದ್ರ ಅಂಚೆ ಕಚೇರಿ ಬಸವನಗುಡಿಯ ಪುಂಜಾಲಕಟ್ಟೆ ಅಂಚೆ ಕಚೇರಿಗೆಂದು ಶಾಲಿನಿ ಯು. ಅವರನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಬಸವನಗುಡಿ ಎಂಬಲ್ಲಿರುವ ಅಂಚೆ ಕಚೇರಿಯ ಮುಂಭಾಗ ಬಂದು ಕೇಂದ್ರ ಅಂಚೆ ಕಚೇರಿಗೆ ಹೋಗಲು ಆಕ್ಟಿವಾ ಸ್ಕೂಟರ್ ನ್ನು ಇಂಡಿಕೇಟರ್ ಹಾಕಿ ನಿಲ್ಲಿಸಿದ್ದರು.
ಈ ವೇಳೆ ಅವರ ಹಿಂದಿನಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಚಾಲಕ ಮಂಜುನಾಥ ಉಪ್ಪಾರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಶ್ರೇಯಸ್ ಅವರ ಸ್ಕೂಟರಿಗೆ ಢಿಕ್ಕಿ ಹೊಡೆಸಿದ್ದಾನೆ ಎನ್ನಲಾಗಿದೆ. ಪರಿಣಾಮ ಶ್ರೇಯಸ್ ಹಾಗೂ ಸಹಸವಾರೆ ಶಾಲಿನಿ ಯು. ಅವರು ಆಕ್ಟಿವಾ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.