ಸುಳ್ಯ, ಮಾ. 31(DaijiworldNews/TA): ದುಗ್ಗಲಡ್ಕ ಬಳಿಯ ಕೊಯಿಕುಳಿ ಪ್ರದೇಶದಲ್ಲಿ ಖಾಸಗಿ ಬಸ್ ವಿದ್ಯುತ್ ಲೈನ್ಗೆ ತಾಗಿದ ಪರಿಣಾಮ ವಿದ್ಯುತ್ ಕಂಬ ಮುರಿದು ರಸ್ತೆಗೆ ಬಿದ್ದ ಘಟನೆ ಸೋಮವಾರ ನಡೆದಿದೆ.

ಕೆಲ ದಿನಗಳ ಹಿಂದೆ ಸುರಿದ ಭಾರೀ ಗಾಳಿ-ಮಳೆಯ ಪರಿಣಾಮವಾಗಿ ಕೊಯಿಕುಳಿ ಭಾಗದಲ್ಲಿ ಹಲವು ವಿದ್ಯುತ್ ಕಂಬಗಳು ಈಗಾಗಲೇ ಕುಸಿದು ಬಿದ್ದಿದ್ದವು. ಅವುಗಳನ್ನು ರಸ್ತೆ ಬದಿಗೆ ಸರಿಸಿ ಇಡಲಾಗಿತ್ತು. ಆದರೆ ತಿರುವಿನ ಪ್ರದೇಶದಲ್ಲಿ ವಿದ್ಯುತ್ ತಂತಿಗಳು ಕೆಳಮಟ್ಟದಲ್ಲಿ ಜೋತು ಬಿದ್ದ ಸ್ಥಿತಿಯಲ್ಲೇ ಉಳಿದಿದ್ದವು. ಸೋಮವಾರ ಸುಬ್ರಹ್ಮಣ್ಯ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ನ ಮೇಲ್ಭಾಗಕ್ಕೆ ಈ ತಂತಿಗಳು ತಾಗಿದ್ದು, ಅದರ ಪರಿಣಾಮವಾಗಿ ತಂತಿಗಳು ಎಳೆಯಲ್ಪಟ್ಟು ವಿದ್ಯುತ್ ಕಂಬ ಮುರಿದು ರಸ್ತೆಗೆ ಬಿದ್ದಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.
ಮಾರ್ಚ್ 28ರಂದು ಸಂಭವಿಸಿದ ಗಾಳಿ-ಮಳೆಯಿಂದ ವಿದ್ಯುತ್ ಲೈನ್ಗಳಿಗೆ ಹಾನಿಯಾಗಿದ್ದು, ಮೆಸ್ಕಾಂ ವತಿಯಿಂದ ಇನ್ನೂ ಸಂಪೂರ್ಣ ದುರಸ್ತಿ ಕಾರ್ಯ ಪೂರ್ಣಗೊಂಡಿಲ್ಲ. ಈ ಕಾರಣದಿಂದ ದುಗ್ಗಲಡ್ಕ ಭಾಗದಲ್ಲಿ ವಿದ್ಯುತ್ ಸರಬರಾಜು ಕೂಡ ಮರುಸ್ಥಾಪನೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಬಸ್ ತಂತಿಗೆ ತಾಗಿದರೂ ವಿದ್ಯುತ್ ಸಂಪರ್ಕ ಇರದ ಕಾರಣ ಯಾವುದೇ ದೊಡ್ಡ ಅಪಾಯ ಸಂಭವಿಸಿಲ್ಲ. ಆದರೆ ಮೆಸ್ಕಾಂನ ನಿಧಾನಗತಿಯ ಕಾರ್ಯದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.