ಉಡುಪಿ, ಆ 06 (Daijiworld News/MSP): ಜಿಲ್ಲೆಯಲ್ಲಿ ಮಂಗಳವಾರ ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಯ ಪರಿಣಾಮವಾಗಿ ಹಲವೆಡೆ ಅನಾಹುತಗಳು ಸಂಭವಿಸಿದ ವರದಿಯಾಗಿದೆ. ಜಿಲ್ಲೆಯ ಅಜ್ಜರಕಾಡು ಎಲ್ಐಸಿ ಸನಿಹದ ರಸ್ತೆ ಬಳಿ ನಾಲ್ಕಕ್ಕೂ ಹೆಚ್ಚು ಮರ ಧರೆಗುರುಳಿದೆ. ಮಾತ್ರವಲ್ಲದೆ 10 ವಿದ್ಯುತ್ ಕಂಬ ಉರುಳಿಬಿದ್ದಿದೆ. ವಿದ್ಯುತ್ ಕಂಬ ಹಾಗೂ ಮರ ಬಿದ್ದ ಪರಿಣಾಮ 4 ಅಂಗಡಿಗಳು ಮತ್ತು ನಿಲ್ಲಿಸಿದ್ದ 1 ಮಿನಿ ಬಸ್, ಇನ್ನೊಂದೆಡೆ ರಿಕ್ಷಾ ಜಖಂಗೊಂಡಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಮುಂದಾಗುವ ಅನಾಹುತ ತಪ್ಪಿದೆ.
ಇನ್ನೊಂದೆಡೆ ಜಿಲ್ಲೆಯ ಮುಕುಂದ ಕೃಪಾ ಶಾಲೆಯ ಆವರಣದಲ್ಲೂ ಮರವೊಂದು ಧರಾಶಾಹಿಯಾಗಿದ್ದರೆ, ಗಾಳಿ ಮಳೆಯ ರಭಸಕ್ಕೆ ಕುಕ್ಕಿಕಟ್ಟೆಯ ಸೈಕಲ್ ಅಂಗಡಿಯ ಮೇಲ್ಛಾವಣೀ ಹಾರಿಹೋಗಿದೆ. ಇನ್ನೊಂದೆಡೆ ಶಿರ್ವ ಕೋಡು ಶ್ರೀ ದುರ್ಗಾಂಬಿಕಾ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯ 150 ಕ್ಕೂ ಹೆಚ್ಚು ಹಂಚುಗಳು ಹಾರಿ ಹೋಗಿದೆ. ಈ ಸಂದರ್ಭ ಶಾಲೆಯ ತರಗತಿಗಳು ನಡೆಯುತ್ತಿದ್ದು ಅದೃಷ್ಟವಶಾತ್ ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದಾರೆ.