ಮಂಗಳೂರು,ಆ.06 (Daijiworld News/RD): ಗೋ ಸಾಗಾಟದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ದ.ಕ ಜಿಲ್ಲೆಯಲ್ಲಿ ''ಲೈವ್ ಸ್ಟಾಕ್ ಲಾಜಿಸ್ಟಿಕ್” ಎಂಬ ಹೊಸ ಆಪ್ನ್ನು ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ಗೋ ಸಾಗಾಟಗಾರರು ಇನ್ನು ಮುಂದೆ ಈ ಆಪ್ ನ್ನು ಡೌನ್ ಲೋಡ್ ಮಾಡಬೇಕು. ಇದರಲ್ಲಿ ಗೋ ಸಾಗಾಟಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಒದಗಿಸಬಹುವುದು. ಇದು ಗೋ ಸಾಗಾಟಕ್ಕೆ ಸಮ್ಮತಿಯಾಗಿರುವುದಿಲ್ಲ, ಬದಲಾಗಿ ಗೋವುಗಳನ್ನು ಸಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಳ್ಳುವ ಸಲುವಾಗಿ ಸಾಗಾಟಗಾರರು ಇದರಲ್ಲಿ ಮಾಹಿತಿಯನ್ನು ನೀಡುತ್ತಾ ಇರಬೇಕಾಗುತ್ತೆ, ಸದ್ಯ ಮಾಹಿತಿಗಷ್ಟೇ ಈ ಆಪ್ ಇರಲಿದ್ದು, ಜೊತೆಗೆ ಈ ಆಪ್ನಲ್ಲಿ ಜಿಪಿಎಸ್ ಸಹಾಯದಿಂದ ವಾಹನಗಳನ್ನು ಪತ್ತೆ ಹಚ್ಚಲು ಸಹಾಯವಾಗಲಿದೆ. ಜೊತೆಗೆ ಸಾಗಾಟಕ್ಕೆ ಸಂಬಂಧಪಟ್ಟ ಚಿತ್ರಗಳನ್ನು ಕೂಡ ಇದರಲ್ಲಿ ಅಪ್ಲೋಡ್ ಮಾಡಲಾಗುವುದು. ಈ ಎಲ್ಲಾ ವಿಚಾರದ ಬಗ್ಗೆ ಗೋ ಸಾಗಾಟ ಮಾಡುವವರನ್ನು ಕರೆಸಿ ಮಾತುಕತೆ ನಡೆಸಲಾಗಿದೆ.
ಮಾಹಿತಿ ನೀಡುವುದು ಕಡ್ಡಾಯವಲ್ಲದಿದ್ದರೂ, ಗೋ ಸಾಗಾಟಗಾರರಿಂದಲೇ ಈ ಬೇಡಿಕೆ ಬಂದಿದ್ದು ಆದುದರಿಂದ ಜಿಲ್ಲಾಡಳಿತ ಈ ಆಪ್ ರೂಪಿಸುವ ಮೂಲಕ ನೂತನ ಕ್ರಮ ಕೈಗೊಂಡಿದೆ. ಹೀಗಾಗಿ ಈ ಆಪ್ ಮೂಲಕ ಅಧಿಕಾರಿಗಳಿಗೆ ಗೋ ಸಾಗಾಟ ಮಾಡುವ ಬಗ್ಗೆ ಮಾಹಿತಿಯನ್ನು ಕಲೆಹಾಕಲು ಸುಲಭವಾಗಲಿದೆ. ಆದುದರಿಂದ ಕಾನೂನುಬದ್ಧವಾಗಿ ಜಾನುವಾರುಗಳನ್ನು ಸಾಗಾಟ ಮಾಡುವವರಿಗೆ ಈ ಒಂದು ಆಪ್ ಉಪಯೋಗವಾಗಲಿದೆ.
ಅಕ್ರಮ ಗೋ ಸಾಗಾಟದ ಕುರಿತು ಸಂಶಯವಿದ್ದಾಗ 1077 ಅಥವಾ 100 ಸಹಾಯವಾಣಿಗೆ ಕರೆ ಮಾಡಿ ತಕ್ಷಣ ದೂರು ನೀಡಬಹುದು ಎಂದು ಈ ಸಂದರ್ಭದಲ್ಲಿ ಹೇಳಿದರು. ಇನ್ನೆರಡು ದಿನಗಳಲ್ಲಿ ಈ ಆಪ್ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.