ಮಂಗಳೂರು, ಆ.06(Daijiworld News/SS): ಕಳೆದೆರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಮಳೆ ಬಿರುಸುಗೊಂಡಿದ್ದು, ಸುರಿದ ಭಾರೀ ಮಳೆಗೆ ಉರ್ವ ಪೆಲ್ಸ್ ಪೇಟೆಯಲ್ಲಿ ಗೌರಿ ಎಂಬವರ ಮನೆಯ ಮೇಲೆ ಮರದ ಬೃಹತ್ ರೆಂಬೆಯೊಂದು ಮುರಿದ್ದು ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ. ಮಾತ್ರವಲ್ಲ, ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತಿದೆ. ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ಮುಂಗಾರು ಮಳೆ ಅಬ್ಬರ ಪಡೆದಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದೆ. ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿರುವ ಹಿನ್ನೆಲೆಯಲ್ಲಿ ಆ.4ರ ಸಂಜೆಯಿಂದಲೇ ಕರಾವಳಿ ಪ್ರದೇಶದಲ್ಲಿ ದಟ್ಟ ಮೋಡ ಆವರಿಸಿತ್ತು. ಬಳಿಕ ಆಗಾಗ ಬಿರುಸಿನ ಮಳೆ ಸುರಿಯುತ್ತಲೇ ಇತ್ತು. ಇಂದು ಕೂಡ ಹಲವು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ.
ಜಿಲ್ಲೆಯಲ್ಲಿ ಮಳೆ ಜತೆಗೆ ಗಾಳಿಯ ಅಬ್ಬರವೂ ಜೋರಾಗಿದ್ದು, ಹಲವೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳುತ್ತಿವೆ. ಉಳ್ಳಾಲ, ಕೋಟ ಪಡುಕರೆ ಮತ್ತು ಕಿರಿ ಮಂಜೇಶ್ವರದಲ್ಲಿ ಕಡಲ್ಕೊರೆತದ ಭೀತಿ ಎದುರಾಗಿದೆ. ಸುಬ್ರಹ್ಮಣ್ಯ ಸ್ನಾನ ಘಟ್ಟ ಇದೀಗ ಸಂಪೂರ್ಣ ಜಲಾವೃತ್ತಗೊಂಡಿದೆ. ಭಾರಿ ಮಳೆಯಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿರುವ ಕುರಿತು ವರದಿಯಾಗಿದೆ.