ಮೂಡುಬಿದಿರೆ, ಆ 06 (Daijiworld News/MSP): ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಶ್ವತ್ಥಪುರ ಬೇರಿಂಜ ಎಂಬಲ್ಲಿ ಉರುಳಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ಹಾಗೂ ಪಿಲಿಕುಳ ನಿಸರ್ಗಧಾಮದ ಅಧಿಕಾರಿಗಳ ತಂಡ ಮಂಗಳವಾರ ರಕ್ಷಿಸಿದೆ.
ಅಶ್ವತ್ಥಪುರದಿಂದ ಕೊಪ್ಪದಕುಮೇರಿಗೆ ಹೋಗುವ ರಸ್ತೆಯ ಪಕ್ಕದಲ್ಲಿ, ಬೇರಿಂಜ ಪ್ರದೇಶದಲ್ಲಿರುವ ಗುಡ್ಡದ ತಪ್ಪಲಿನಲ್ಲಿ ಹಂದಿ ಹಿಡಿಯುವುದಕೋಸ್ಕರ ಯಾರೋ ಹಾಕಿರುವ ಉರುಳಿಗೆ ಮಂಗಳವಾರ ಬೆಳಗ್ಗೆ ಹೆಣ್ಣು ಚಿರತೆ ಬಿದ್ದು ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಪಿಲಿಕುಳ ಬಯಲೋಜಿಕಲ್ ಥೀಮ್ ಪಾರ್ಕ್ನ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ ಹಾಗೂ ಮೂಡುಬಿದಿರೆ ವಲಯ ಅರಣ್ಯ ಅಧಿಕಾರಿ ಪ್ರಕಾಶ್ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಪಿಲಿಕುಳ ನಿಸರ್ಗಧಾಮದ ಹಿರಿಯ ವೈಜ್ಞಾನಿಕ ಅಧಿಕಾರಿ ವಿಕ್ರಂ ಲೋಬೊ ಹಾಗೂ ಪ್ರಾಣಿಪಾಲಕ ದಿನೇಶ್ ಅರಿವಳಿಕೆ ಇಂಜೆಕ್ಷನ್ ಅನ್ನು ಬಂದೂಕು ಮೂಲಕ ನೀಡಿ, ಚಿರತೆ ಪ್ರಜ್ಞೆ ತಪ್ಪಿಸಿದರು. ಬಳಿಕ ಚಿರತೆಯನ್ನು ಹಿಡಿದು ಬೋನಿನಲ್ಲಿ ಹಾಕಿ ಪಿಲಿಕುಳ ನಿಸರ್ಗಧಾಮಕ್ಕೆ ಕೊಂಡೊಯ್ಯಲಾಯಿತು. ಭಾರಿ ಮಳೆಯಿದ್ದ ಕಾರಣ ಚಿರತೆ ರಕ್ಷಣೆಗೆ ಅಡಚಣೆಯಾಗಿ, ಮಧ್ಯಾಹ್ನವರೆಗೆ ಕಾರ್ಯಾಚರಣೆ ನಡೆಯಿತು.
ಉಪವಲಯ ಅರಣ್ಯಾಧಿಕಾರಿ ಅಶ್ವತ್ಥ್ ಗಟ್ಟಿ ಸಹಿತ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆಗೆ ಸಹಕರಿಸಿದರು. ಚಿರತೆಯನ್ನು ನೋಡಲು ನೂರಾರು ಮಂದಿ ಬೆಳಗ್ಗಿನಿಂದ ಮಧ್ಯಾಹ್ನವರೆಗೆ ಸ್ಥಳದಲ್ಲಿ ಸೇರಿದ್ದರು.