ಸುಬ್ರಹ್ಮಣ್ಯ, ಆ 06 (DaijiworldNews/SM): ಸಕಲೇಶಪುರ ಮತ್ತು ಹಾಸನ ಭಾಗದಲ್ಲಿ ನಿರಂತರವಾಗಿ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಮಂಗಳೂರು-ಬೆಂಗಳೂರು ರೈಲು ಹಳಿಯ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲು ನಿಲ್ದಾಣ-ಸಕಲೇಶಪುರ ನಡುವಿನ ಎಡಕುಮೇರಿ ಮತ್ತು ಸಿರಿಬಾಗಿಲಿನ ಪರಿಸರದಲ್ಲಿ ಸುಮಾರು ಮೂರು ಕಡೆಗಳಲ್ಲಿ ಹಳಿಯ ಮೇಲೆ ಮಣ್ಣು ಕುಸಿದಿದೆ.ಇದರಿಂದಾಗಿ ಮಂಗಳೂರು- ಹಾಸನ ರೈಲು ಸಂಚಾರ ಸ್ಥಗಿತಗೊಂಡಿದೆ.
ನೆಟ್ಟಣ ರೈಲು ನಿಲ್ದಾಣದಿಂದ ಸಕಲೇಶಪುರ ರೈಲು ನಿಲ್ದಾಣದ ನಡುವಣ ಸಿರಿಬಾಗಿಲು ರೈಲು ನಿಲ್ದಾಣದ ಸಮೀಪದ ದೂರ ಸಂಖ್ಯೆ 86/100 ಮತ್ತು 83ರ ಆಸುಪಾಸಿನಲ್ಲಿ ಸುಮಾರು ಎರಡರಿಂದ ಮೂರು ಕಡೆ ಹಳಿಯ ಮೇಲೆ ಗುಡ್ಡ ಕುಸಿದಿದೆ. ಈ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಮತ್ತಷ್ಟು ಕಡೆ ಮಣ್ಣು ಕುಸಿಯುವ ಆತಂಕವಿದೆ.
ರೈಲು ಸಂಚಾರ ಸ್ಥಗಿತ:
ಮಂಗಳವಾರ ಮುಂಜಾನೆಯ ಬೆಂಗಳೂರು-ಮಂಗಳೂರು ರೈಲು ಹಾಗೂ ಗೂಡ್ಸ್ ರೈಲೊಂದು ಸಂಚರಿಸಿದ ಬಳಿಕ ಮುಂಜಾನೆ ೭ ಗಂಟೆಗೆ ಹಳಿಯ ಮೇಲೆ ಗುಡ್ಡ ಕುಸಿಯಿತು. ತಕ್ಷಣವೇ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಈ ಕಾರಣದಿಂದಾಗಿ ಬೆಂಗಳೂರು-ಮಂಗಳೂರು ಮಧ್ಯಾಹ್ನದ ರೈಲು 16575 ಅನ್ನು ಹಾಸನದಲ್ಲಿ ತಡೆಹಿಡಿಯಲಾಯಿತು. ಮದ್ಯಾಹ್ನ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ರೈಲು 16516ನ್ನು ಈ ಮಾರ್ಗದಲ್ಲಿ ತಡೆಯಲಾಯಿತು. ಬಳಿಕ ಅದು ಪಥ ಬದಲಾಯಿಸಿ ಚಲಿಸಿತು.
ಹಳಿಯ ಮೇಲೆ ಬೃಹತ್ ಮಣ್ಣು:
ಸುಬ್ರಹ್ಮಣ್ಯ ರೋಡ್ ನೆಟ್ಟಣ ರೈಲು ನಿಲ್ದಾಣದಿಂದ ಮುಂದೆ ಬರುವ ಸಿರಿಬಾಗಿಲಿನ ಸಮೀಪದ ಮೂರು ಕಡೆ ಎಂಬಲ್ಲಿ ಬೃಹತ್ ಗಾತ್ರದ ಗುಡ್ಡವು ಹಳಿಯ ಮೇಲೆ ಕುಸಿದು ಬಿದ್ದಿದೆ. ಇದರೊಂದಿಗೆ ಬಾರೀ ಪ್ರಮಾಣದ ಮಣ್ಣು ಹಳಿಯ ಮೇಲೆ ಬಂದು ಬಿದ್ದಿದೆ. ಈ ಘಟನೆ ತಿಳಿದ ತಕ್ಷಣ ಕಾರ್ಯಪ್ರವೃತ್ತವಾದ ರೈಲ್ವೆ ಇಲಾಖೆಯು ತಕ್ಷಣ ತೆರವು ಕಾರ್ಯ ಆರಂಭಿಸಿ ಮಣ್ಣು ತೆರವು ಕಾರ್ಯಾಚರಣೆ ನಡೆಸಿತು.
ಸುಮಾರು 50ಕ್ಕೂ ಅಧಿಕ ಕಾರ್ಮಿಕರು ಮಣ್ಣು ತೆರವು ಕಾರ್ಯವನ್ನು ಭರದಿಂದ ನಡೆಸಿದ್ದಾರೆ. ಭಾರೀ ಮಳೆಯನ್ನು ಲೆಕ್ಕಿಸದೆ ಕಾರ್ಮಿಕರು ಹಳಿಯ ಮೇಲಿದ್ದ ಮಣ್ಣನ್ನು ತೆರವುಗೊಳಿಸುತ್ತಿದ್ದಾರೆ. ರಾತ್ರಿ-ಹಗಲೆನ್ನದೆ ಭರದಿಂದ ಕಾರ್ಯಾಚರಣೆ ನಡೆಯುತ್ತಿದೆ.