ಮಂಗಳೂರು, ಆ 06 (DaijiworldNews/SM): ಸ್ನೇಹಿತನೋರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಮಯಿಲ್ಲ ನಿವಾಸಿಗಳಾದ ಜೀವನ್(37) ಹಾಗೂ ದಿಲೇಶ್ (35) ಶಿಕ್ಷೆಗೊಳಗಾದ ಅಪರಾಧಿಗಳು.
ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸೋಮವಾರ ಕೃತ್ಯವನ್ನು ಕೊಲೆಯಲ್ಲದ ಮಾನವ ಹತ್ಯೆ ಎಂದು ಸಾಬೀತಾಗಿದ್ದು, ಇಬ್ಬರು ಆರೋಪಿಗಳಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿ ಮಂಗಳವಾರ ತೀರ್ಪು ಪ್ರಕಟಿಸಿದೆ.
ಸ್ನೇಹಿತ ಕೆ.ಸಿ.ಸಜೇಶ್(33) ಎಂಬವರನ್ನು ಆಪರಾಧಿಗಳು ಕೊಲೆ ಮಾಡಿದ್ದರು. ಅಪರಾಧಿಗಳು ದಂಡ ತೆರಳು ತಪ್ಪಿದರೆ ಮತ್ತೆ ಒಂದು ವರ್ಷ ಜೈಲುಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಪ್ರಕರಣ ವಿವರ:
2014ರ ಏಪ್ರಿಲ್ 1ರಂದು ಕೇರಳದಲ್ಲಿ ಮದ್ಯ ಮಾರಾಟ ನಿಷೇಧ ದಿನವಾಗಿತ್ತು. ಅದಕ್ಕಾಗಿ ಮೂವರು ಸ್ನೇಹಿತರು ರಕ್ತದಾನ ಮಾಡುವುದಿದೆ ಎಂದು ಮನೆಯಲ್ಲಿ ಹೇಳಿ ಕಾರಿನಲ್ಲಿ ಮಂಗಳೂರಿಗೆ ಬಂದಿದ್ದರು. ನಗರದ ಬಾರ್ಗಳಲ್ಲಿ ಮದ್ಯ ಸೇವಿಸಿ ವಸತಿಗೃಹವೊಂದರಲ್ಲಿ ರೂಮ್ ಪಡೆದು ತಂಗಿದ್ದರು. ಮರುದಿನ ಹಣ ಪಣಕಿಟ್ಟು ಇಸ್ಪೀಟ್ ಆಡುತ್ತಿದ್ದರು. ಈ ಸಂದರ್ಭ ಸಜೇಶ್ ಬಳಿ ಇದ್ದ ಹಣವೆಲ್ಲ ಖಾಲಿಯಾಗಿತ್ತು.
ಈ ಹಿಂದೆ ಸಜೇಶ್ ಆತನ ಚಿಕ್ಕಮ್ಮನ ಬಳಿಯಿಂದ ಜೀವನ್ಗೆ 30 ಸಾವಿರ ರೂ. ಸಾಲವಾಗಿ ನೀಡಿದ್ದರು. ಆ ಹಣವನ್ನು ಹಿಂದಿರುಗಿಸುವಂತೆ ಸಜೇಶ್ ಕೇಳಿದ್ದರು. ಆಗ ಅವರ ನಡುವೆ ಜಗಳವಾಗಿದೆ. ಹೊಡೆದಾಟವಾಗುವುದನ್ನು ಗಮನಿಸಿದ ವಸತಿಗೃಹದವರು ಅಂದೇ ಸಂಜೆ ಅವರನ್ನು ರೂಮ್ ಖಾಲಿ ಮಾಡುವಂತೆ ಸೂಚನೆ ನೀಡಿದ್ದರು.
ಅಂದು ರಾತ್ರಿ 7:30ಕ್ಕೆ ಅವರು ರೂಮ್ನಿಂದ ಹೊರಟಿದ್ದರು. ಬಾರ್ವೊಂದಕ್ಕೆ ತೆರಳಿದ ಮೂವರು ಮದ್ಯ ಸೇವನೆ ಮಾಡಿ ಸಜೇಶ್ರನ್ನು ಉಜ್ಜೋಡಿ ಪೆಟ್ರೋಲ್ ಪಂಪ್ ಬಳಿಗೆ ಕರೆದೊಯ್ದು ಇಂಟರ್ಲಾಕ್ನಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.
ಏ.3ರಂದು ಬೆಳಗ್ಗೆ ಪೆಟ್ರೋಲ್ ಪಂಪ್ ಸಿಬ್ಬಂದಿ ಕರ್ತವ್ಯಕ್ಕೆ ಬಂದಾಗ ಸಜೇಶ್ನ ಶವ ಪತ್ತೆಯಾಗಿತ್ತು. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದಾಗ ಸಜೇಶನ ಕಿಸೆಯಲ್ಲಿ ಗುರುತಿನ ಚೀಟಿ ಪತ್ತೆಯಾಗಿದ್ದು, ಆ ಮೂಲಕ ಆತನ ಊರಿಗೆ ಮಾಹಿತಿ ನೀಡಿದ್ದರು. ಕೊಲೆಯಾದ ಯುವಕನ ಸಹೋದರಿ ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಏ.24ರಂದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಸುದೀರ್ಘ ವಿಚಾರಣೆಯ ಬಳಿಕ ಅಪರಾಧ ಕೃತ್ಯ ಸಾಬೀತಾಗಿದ್ದು, ಅವರಿಗೆ ಶಿಕ್ಷೆ ವಿಧಿಸಲಾಗಿದೆ.