ಮಂಗಳೂರು, ಆ.07(Daijiworld News/SS): ಜಿಲ್ಲೆಯಲ್ಲಿ ಗಲಭೆಗೆ ಕಾರಣವಾಗುತ್ತಿರುವ ಅಕ್ರಮ ಗೋಸಾಟ ನಿಯಂತ್ರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಮೊಬೈಲ್ ಆ್ಯಪ್ ಸಿದ್ಧಗೊಳಿಸಿದೆ. ಮರಳು ಸಾಗಾಟಕ್ಕೆ ಸ್ಯಾಂಡ್ ಬಝಾರ್ ಬಳಿಕ, ಅಕ್ರಮ ಸಾಗಾಟ ತಡೆಗಾಗಿ ಲೈವ್ಸ್ಟಾಕ್ ಲಾಜಿಸ್ಟಿಕ್ ಕಂಟ್ರೋಲ್ ಆ್ಯಪ್ ರೂಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾಹಿತಿ ನೀಡಿದ್ದು, ಜಿಲ್ಲೆಯಲ್ಲಿ ಜಾನುವಾರುಗಳ ಅಧಿಕೃತ ಸಾಗಾಟಕ್ಕೆ ಕಾನೂನಿನ ಸಹಕಾರ ಒದಗಿಸುಲು ಜಿಲ್ಲಾಡಳಿತ ಆ್ಯಪ್ ಸಿದ್ಧಪಡಿಸಿದೆ. ಒಂದೆರಡು ದಿನಗಳಲ್ಲಿ ಗೂಗಲ್ ಪ್ಲೇಸ್ಟೋರ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದಕ್ಕೆ ಎಲ್ಎಲ್ಸಿ (ಲೈವ್ಸ್ಟಾಕ್ ಲಾಜಿಸ್ಟಿಕ್ಸ್ ಕಂಟ್ರೋಲ್) ಆ್ಯಪ್ ಎಂದು ಹೆಸರಿಸಲಾಗಿದೆ ಎಂದು ತಿಳಿಸಿದರು.
ಗೋ ಸಾಗಾಟಗಾರರು ‘ಎಲ್ಎಲ್ಸಿ’ ಹೆಸರಿನ ಮೊಬೈಲ್ ಆಧಾರಿತ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಗೋ ಸಾಗಾಟಕ್ಕೆ ಸಂಬಂಧಿಸಿದ ಮಾಹಿತಿ ಒದಗಿಸಬಹುದು. ಇದು ಗೋ ಸಾಗಾಟಕ್ಕೆ ಸಮ್ಮತಿ ಅಲ್ಲ. ಆದರೆ ಸಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಖಾತರಿಪಡಿಸಲು ಸಾಗಾಟದಾರರು ನೀಡುವ ಮಾಹಿತಿ ಮಾತ್ರ ಎಂದು ತಿಳಿಸಿದರು.
ಈ ಆ್ಯಪ್ನಲ್ಲಿ ಜಾನುವಾರು ಸಾಗಾಟ ಮಾಹಿತಿ ಅಪ್ಲೋಡ್ ಮಾಡುವ ಅವಕಾಶ ಇದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಾಟವನ್ನು ಈ ಮೂಲಕ ಖಚಿತಪಡಿಸಿಕೊಳ್ಳಬಹುದು. ಮುಂದೆ ಜಿಪಿಎಸ್ ಟ್ರಾಕಿಂಗ್ ಸಿಸ್ಟಮ್ ಕೂಡ ಜಾರಿ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗೋಸಾಗಾಟ ವಿಷಯವಾಗಿ ಸೌಹಾರ್ದತೆಗೆ ಧಕ್ಕೆಯಾದ ಪ್ರಸಂಗಗಳಿವೆ. ಮುಂದೆ ಇದಕ್ಕೆ ಅವಕಾಶ ಇಲ್ಲ. ಬೆರಳೆಣಿಕೆಯ ಮಂದಿ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿ ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ. ಮುಂದೆ ಅಂತಹ ಕಾನೂನು ಬಾಹಿರ ಕ್ರಮಗಳಿಗೆ ಅವಕಾಶ ಇಲ್ಲ ಎಂದು ಹೇಳಿದರು.
ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿ ಖಾನೆ ಕಂಡು ಬಂದರೆ ಅಧಿಕಾರಿಗಳ ಗಮನಕ್ಕೆ ತರಬೇಕು, ಜಿಲ್ಲಾಡಳಿತದ ನಿಯಂತ್ರಣ ಕೊಠಡಿ (1077) ದಿನದ 24 ಗಂಟೆ ಕಾರ್ಯನಿರತವಾಗಿದೆ. ಅಲ್ಲಿಗೆ ಮಾಹಿತಿ ನೀಡಿದರೆ ಅಧಿಕಾರಿಗಳು ಸ್ಥಳಕ್ಕೆ ಬಂದು ಕ್ರಮ ಜರುಗಿಸುತ್ತಾರೆ. ಪೊಲೀಸ್ ನಿಯಂತ್ರಣ ಕೊಠಡಿಗೂ(100) ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದರು.
ಬಕ್ರೀದ್ ಹಿನ್ನೆಲೆಯಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುವವರು ಮತ್ತು ಅದನ್ನು ತಡೆದು ಕಾನೂನು ಕೈಗೆತ್ತಿಕೊಳ್ಳುವ ಇಬ್ಬರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಬ್ಬದ ಸಂದರ್ಭ ಜಾನುವಾರು ಸಾಗಾಟ ನಡೆಯುತ್ತದೆ. ಅದರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಇದ್ದಾರೆ. ಯಾರಿಗಾದರೂ ಸಂಶಯವಿದ್ದರೆ ಸಹಾಯವಾಣಿ ಸಂಖ್ಯೆ 1077 ಅಥವಾ 100ಕ್ಕೆ ತಿಳಿಸಬಹುದು. ಅದು ಬಿಟ್ಟು ಗುಂಪುಗಟ್ಟಿ ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸಲಾಗದು ಎಂದು ಎಚ್ಚರಿಸಿದರು.