ಕಾಪು, ಆ 07 (Daijiworld News/MSP): ಅಕ್ರಮವಾಗಿ ಗೋಸಾಗಾಟ ಮಾಡುತ್ತಿರುವ ಐದು ಲಾರಿಗಳನ್ನು ಸ್ಥಳೀಯರ ಸಹಕಾರದೊಂದಿಗೆ ಪೊಲೀಸರು ಪತ್ತೆ ಹಚ್ಚಿದ ಘಟನೆ ಆ 07 ರ ಬುಧವಾರ ಕಾಪುವಿನ ಪೊಲಿಪು ಜಂಕ್ಷನ್ ಬಳಿ ನಡೆದಿದೆ.
ಕೇರಳದಿಂದ ಉಡುಪಿಗೆ ಅಕ್ರಮವಾಗಿ ಐದು ಲಾರಿಗಳಲ್ಲಿ ದನಕರುಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಕೇರಳ ನೋಂದಣಿಯ ಐದು ಲಾರಿಗಳಲ್ಲಿ ದನ ಸಾಗಾಟ ನಡೆಸುತ್ತಿದ್ದಾಗ ಪೋಲಿಸರು ಕಾಪು ಮಸೀದಿಯ ಎದುರು ಲಾರಿ ಗಳನ್ನು ತಡೆದು ಅದರಲ್ಲಿ ಸಾಗಾಟ ಮಾಡಲಾಗುತ್ತಿದ್ದ 60 ರಕ್ಕೂ ಹೆಚ್ಚು ಗೋವುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೃಹತ್ ಪ್ರಮಾಣದಲ್ಲಿ ಗೋವು ಸಾಗಾಟ ಮಾಡುತ್ತಿದ್ದ ಬಗ್ಗೆ ವಿಚಾರ ಎಲ್ಲೆಡೆ ಹರಡುತ್ತಿದ್ದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಕಾಪು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾಪು ಪೊಲೀಸರು ಪ್ರಾಣಿ ತಡೆ ಕಾಯ್ದೆ, ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಮತ್ತು ಅಕ್ರಮ ಗೋ ಸಾಗಾಟ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.