ಭಟ್ಕಳ, ಆ 07 (Daijiworld News/MSP): ಮಳೆಗಾಳಿಗೆ ಭಟ್ಕಳ ತಾಲೂಕು ಸಂಪೂರ್ಣವಾಗಿ ತತ್ತರಿಸಿ ಹೋಗಿದೆ. ತೀವ್ರಗೊಂಡ ಮಳೆಗೆ ಇಡೀ ಭಟ್ಕಳವೇ ಮುಳುಗಿದಂತೆ ಭಾಸವಾಗುತ್ತಿದ್ದು, ಜನರು ಕಂಗಾಲಾಗಿದ್ದಾರೆ. ತಗ್ಗು ಪ್ರದೇಶದ ನೂರಾರು ಮನೆ, ಅಂಗಡಿಗಳು ಜಲಾವೃತಗೊಂಡಿದ್ದು, ಶಾಲೆ, ಅಂಗನವಾಡಿ, ಬ್ಯಾಂಕು ಹೀಗೆ ಎಲ್ಲಾ ಕಟ್ಟಡಗಳು ಸುರಿದು ಬರಿದಾಗುತ್ತಿರುವ ಬಾನಿನ ಆಕ್ರೋಶಕ್ಕೆ ಸಿಲುಕಿಕೊಂಡಿವೆ.
ತಾಲೂಕಿನ ಮೂಡಭಟ್ಕಳ, ಚೌಥನಿ, ಮುಂಡಳ್ಳಿ, ಶಿರಾಲಿ, ಮುರುಡೇಶ್ವರ ಸೇರಿದಂತೆ ಬಹುತೇಕ ಪ್ರದೇಶಗಳು ನೆರೆಗೆ ತುತ್ತಾಗಿವೆ. ಮಳೆ ಈಗ ನಿಲ್ಲಬಹುದು, ನಂತರ ನಿಲ್ಲಬಹುದು ಎಂದು ತಮ್ಮನ್ನು ತಾವೇ ಸಂತೈಸಿಕೊಳ್ಳುತ್ತಿದ್ದ ಜನರು ಮಧ್ಯಾಹ್ನದ ನಂತರ ಮಳೆ ಬಿರುಸಾಗುತ್ತಿದ್ದಂತೆಯೇ ಆಗಸದತ್ತ ಮುಖ ಮಾಡಿ ದೇವರನ್ನು ಕೂಗಲಾರಂಭಿಸಿದ್ದಾರೆ. ಮೂಡಭಟ್ಕಳ, ಚೌಥನಿಯಲ್ಲಿ ಊರು, ಹೊಳೆ ಒಂದಾಗಿದೆ. ಸಮುದ್ರ ಉಬ್ಬರ ಅವಧಿಯಲ್ಲಿ ಮುಂಡಳ್ಳಿ ದ್ವೀಪವಾದ ಕಾರಣ ಪೇಟೆಗೆ ಹೋದ ಜನರು ಮನೆಗೆ ಬರಲಾಗದೇ ಸಂಕಷ್ಟ ಅನುಭವಿಸಿದರು. ತಾಲೂಕಿನ ಹೆಬಳೆ, ಕೈಕಿಣಿ, ಜಾಲಿ, ಶಿರಾಲಿ, ಮುರುಡೇಶ್ವರದಲ್ಲಿ 35ಕ್ಕೂ ಅಧಿಕ ಮನೆಗಳ ಮೇಲ್ಛಾವಣಿ ಗಾಳಿಮಳೆಗೆ ಹಾರಿ ಹೋಗಿದ್ದರೆ, ಹಲವು ಮನೆಗಳ ಮೇಲೆ ಮರ ಮುರಿದು ಬಿದ್ದು ಗೋಡೆ, ಮೇಲ್ಛಾವಣಿ ಕುಸಿತ ಕಂಡಿದೆ. ಕೈಕಿಣಿ ಗ್ರಾಮದ ಕೋಟದಮಕ್ಕಿ ಮಜಿರೆಯ ಹನುಮಂತ ದೇವಡಿಗ, ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಬಬ್ಬನಕಲ್ಲು, ಹೊನ್ನೆಗದ್ದೆ, ಜನತಾಕಾಲೋನಿಯ ಕೃಷ್ಣಪ್ಪ ನಾಯ್ಕ, ಜಟ್ಟಮ್ಮ ವೆಂಕಟಪ್ಪ ನಾಯ್ಕ, ದುರ್ಗಮ್ಮ ನಾಯ್ಕ, ಭಾಸ್ಕರ ನಾಯ್ಕ, ಅಬ್ದುಲ್ ಸತ್ತಾರ್ ಅಹ್ಮದ್ ಶರೀಪ್, ಮುಷ್ತಾಕ್ ಅಹ್ಮದ್ ಮರ್ದನ್ ಸಾಬ್, ಶ್ರೀಧರ ಈರಯ್ಯ ನಾಯ್ಕ, ಅಜೀಜಾ ಫಿರ್ದೋಸ್ ದಾಮ್ದಾ, ಇಬ್ರಾಹಿಮ್ ರುಕ್ನುದ್ದೀನ್ ಸಿಪಾಯಿ, ದುರ್ಗಪ್ಪ ನಾಯ್ಕ, ಮಂಜುನಾಥ ಮಾಸ್ತಪ್ಪ ನಾಯ್ಕ, ಮಂಜುನಾಥ ಭೈರಪ್ಪ ನಾಯ್ಕ, ಮಂಜುನಾಥ ಮೊಗೇರ, ಲಕ್ಷ್ಮೀ ನಾರಾಯಣ ನಾಯ್ಕ, ಸೈಯದ್ ಹಾಶೀಮ್, ಸಮೀರ್ ರಝಾ ಆರ್ಮಾರ್, ಮಹ್ಮದ ಸತ್ತಾರ್, ಇಬ್ಬು ಅಲಿ ಆದಮ್, ಶಿರಾಲಿಯ ಲಕ್ಷ್ಮಣ ಮಾಳು ನಾಯ್ಕ, ಶಿವಮ್ಮ ಭೈರಾ ದೇವಡಿಗ ಬೀರುಳ್ಳಿಮನೆ, ಸುಬ್ರಾಯ ಈರಯ್ಯ ದೇವಡಿಗ, ವೆಂಕಟ್ರಮಣ ಮಂಜಯ್ಯ ದೇವಡಿಗ, ಮಾಸ್ತಮ್ಮ ಕೋಂ ಕೃಷ್ಣಪಪ್ ನಾಯ್ಕ, ರಾಮಚಂದ್ರ ವೆಂಕಟ್ರಮಣ ಕೋಡಿಯಾ, ಮಾದೇವ ತಿಮ್ಮಪ್ಪ ದೇವಡಿಗ ಬೀರುಳ್ಳಿಮನೆ ಮನೆಯ ಮೇಲ್ಛಾವಣಿ ಮುರಿದು ಹಾನಿಗೊಳಾಗದವರಾಗಿದ್ದಾರೆ. ಹೆಬಳೆ ತೆಂಗಿನಗುಂಡಿ ನಾಮಧಾರಿ ಸಮುದಾಯ ಭವನ, ಬಬ್ಬನ್ಕಲ್ ಕಿರಿಯ ಪ್ರಾಥಮಿಕ ಶಾಲೆಗಳ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದೆ. ಸಾಗರ್ರೋಡ್ನಲ್ಲಿ ಮರ ಮುರಿದು ಬಿದ್ದು, ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಯಿತು. ಸತತ 2ನೇ ದಿನವಾದ ಮಂಗಳವಾರವೂ 200ಮೀಮಿಗೂ ಅಧಿಕ ಮಳೆ ಸುರಿದಿದ್ದು, ಬುಧವಾರದವರೆಗೂ ಮಳೆ ಮುಂದುವರೆಯುವ ಸಾಧ್ಯತೆ ಕಂಡು ಬಂದಿದೆ.
ಹೆಸ್ಕಾಂಗೆ ರೂ.6 ಲಕ್ಷ ಹಾನಿ: 2 ದಿನಗಳ ಸತತ ಮಳೆಯಿಂದ 17 ವಿದ್ಯುತ್ ಕಂಬಗಳು ಧರೆಗುರುಳಿವೆ. 3 ವಿದ್ಯುತ್ ಪರಿವರ್ತಕಗಳು ಹಾನಿಗೀಡಾಗಿವೆ. ಹಾನಿಯ ಮೌಲ್ಯ ರೂ.6 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
ತಾಪಂ ತಂಡ ಭೇಟಿ: ಮಳೆ ಸಂತ್ರಸ್ಥ ಶಿರಾಲಿಯ ಬೆಂಗ್ರೆ ಮತ್ತಿತರ ಪ್ರದೇಶಗಳಿಗೆ ತಾಲೂಕು ಪಂಚಾಯತ ಅಧ್ಯಕ್ಷ ಈಶ್ವರ ನಾಯ್ಕ, ಉಪಾಧ್ಯಕ್ಷ ರಾಧಾ ಅಶೋಕ ವೈದ್ಯ, ಸದಸ್ಯ ವಿಷ್ಣು ದೇವಡಿಗ, ಕಾರ್ಯನಿರ್ವಹಣಾಧಿಕಾರಿ ದೇವರಾಜ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಗಳವಾರ ನಿಗದಿಯಾಗಿದ್ದ ತಾಪಂ ಕೆಡಿಪಿ ಸಭೆಯನ್ನು ರದ್ದುಪಡಿಸಲಾಯಿತು
ಬಿರುಗಾಳಿಯಿಂದ ಕಡಲತಡಿಯಲ್ಲಿ ಕೋಲಾಹಲ : ಮಳೆಯೊಂದಿಗೆ ಬೀಸಿ ಬರುತ್ತಿರುವ ವೇಗದ ಗಾಳಿಯಿಂದ ಕಡಲ ತಡಿಯುದ್ಧಕ್ಕೂ ಕೋಲಾಹಲ ಸೃಷ್ಟಿಯಾಗಿದೆ. ಕಡಲ ತಡಿಯಲ್ಲಿ ಹಾಸಿಟ್ಟ ಬೃಹದಾಕಾರದ ಬಂಡೆ ಕಲ್ಲುಗಳು, ತೆಂಗಿನ ಮರಗಳು ಒಂದೊಂದಾಗಿ ಕಡಲ ಒಡಲನ್ನು ಸೇರಿಕೊಳ್ಳುತ್ತಿವೆ. ಕಡಲ ತೀರದ ಮಾರ್ಗವಾಗಿ ಜಾಲಿ ಮತ್ತು ಹೆಬಳೆಯನ್ನು ಸಂಪರ್ಕಿಸುವ ರಸ್ತೆ ಸಮುದ್ರಕ್ಕೆ ಕೊಚ್ಚಿ ಹೋಗಿದೆ. ಕಡಲ ರಕ್ಕಸದಲೆಗಳು ಮೇಲ್ಮುಖವಾಗಿ ಅಪ್ಪಳಿಸುತ್ತ ತಟದ ನಿವಾಸಿಗಳಲ್ಲಿ ಆತಂಕವನ್ನು ಹುಟ್ಟು ಹಾಕಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದಲ್ಲಿ ಸಮುದ್ರ ಕೊರೆತ ಮನೆ ಹಾಗೂ ಕೃಷಿ ಭೂಮಿಗಳನ್ನು ನುಂಗಿ ಹಾಕುವ ಸಾಧ್ಯತೆ ಇದೆ.
ಹೊನ್ನಾವರ ನೆರೆ ಸಂತ್ರಸ್ಥರ ನೆರವಿಗೆ ಶಾಸಕ ಸುನಿಲ್ ನಾಯ್ಕ
ಮಂಗಳವಾರವೂ ಮಳೆ ತೀವೃಗೊಂಡ ಹಿನ್ನೆಲೆಯಲ್ಲಿ ಶಾಸಕ ಸುನಿಲ್ ನಾಯ್ಕ ಮಂಗಳವಾರ ಭಟ್ಕಳ ತಹಸೀಲ್ದಾರ ಕಚೇರಿಯಲ್ಲಿ ಕರೆದಿದ್ದ ಸಭೆಯನ್ನು ರದ್ದುಗೊಳಿಸಿ ಹೊನ್ನಾವರಕ್ಕೆ ನೆರೆ ಸಂತ್ರಸ್ಥರಿಗೆ ನೆರವಾಗಲು ಅತ್ತ ತೆರಳಿದರು. ಬೆಳಿಗ್ಗೆ 5.30 ಗಂಟೆಗೆ ಮನೆಯಿಂದ ಹೊರಟು ಮಂಗಳವಿಡೀ ಹೊನ್ನಾವರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಒಂದಾದರೊಂದರಂತೆ ಭೇಟಿ ನೀಡಿದ ಅವರು, ತಮ್ಮ ಸ್ವಂತ ಹಣದಿಂದ 6 ದೋಣಿಗಳನ್ನು ತಂದು ಜನರಿಗೆ ರಕ್ಷಣೆ ಒದಗಿಸಿದರು. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಹೊನ್ನಾವರದಲ್ಲಿ 13 ಗಂಜಿ ಕೇಂದ್ರಗಳನ್ನು ಆರಂಭಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಟ್ಕಳ ಹಾಗೂ ಹೊನ್ನಾವರ ತಾಲೂಕಿನ ಜನರು ಯಾವುದೇ ಕಾರಣದಿಂದ ಭಯ ಪಡುವುದು ಬೇಡ. ಎಂತಹುದ್ದೇ ಪರಿಸ್ಥಿತಿ ಬಂದರೂ ಜನರೊಂದಿಗೆ ಇದ್ದು, ಪರಿಸ್ಥಿತಿ ನಿಭಾಯಿಸುವುದಾಗಿ ಭರವಸೆ ನೀಡಿದರು. ಭಟ್ಕಳ ಸಹಾಯಕ ಆಯುಕ್ತ ಸಆಜೀದ್ ಮುಲ್ಲಾ ಉಪಸ್ಥಿತರಿದ್ದರು.