ಮಂಗಳೂರು, ಆ.07(Daijiworld News/SS): ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಭಾರಿ ಮಳೆಗೆ ಮಂಗಳೂರು ಪಚ್ಚನಾಡಿ ಡಂಪಿಂಗ್ ಯಾರ್ಡ್'ನ ಮಣ್ಣು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಪರಿಣಾಮವಾಗಿ ಸ್ಥಳಿಯ ಮನೆ ಅಂಗಳಕ್ಕೆ ಕಸದ ರಾಶಿ ಬಿದ್ದಿದೆ. ಸ್ಥಳೀಯ ಬಾವಿಗಳಿಗೂ ಕಸದ ರಾಶಿ ಬಿದ್ದು ಬಾವಿಗಳು ಮುಚ್ಚಿ ಹೋಗಿವೆ. ಮಾತ್ರವಲ್ಲದೆ ಕಸದ ಕೊಂಪೆಯೊಳಗೆ ಜಾನುವಾರುಗಳು ಸಿಲಕುಕಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಭಾರಿ ಮಳೆಗೆ ಮಂಗಳೂರು ಪಚ್ಚನಾಡಿ ಡಂಪಿಂಗ್ ಯಾರ್ಡ್'ನಲ್ಲಿ ಮಣ್ಣು ಸೇರಿದಂತೆ ತ್ಯಾಜ್ಯದ ರಾಶಿ ಸಂಪೂರ್ಣವಾಗಿ ಕುಸಿದಿದ್ದು, ಪಚ್ಚನಾಡಿ ಬಳಿಯ ಮಂದಾರದಲ್ಲಿರುವ ಮನೆ ಸೇರಿದಂತೆ ಅಪಾರದ ಕೃಷಿ ಭೂಮಿಗೆ ಹಾನಿಯಾಗಿದೆ. ಎಕರೆಗಟ್ಟಲೆ ಕೃಷಿ ಭೂಮಿ ಸಂಪೂರ್ಣವಾಗಿ ಹಾನಿಗೊಳಗಾಗಿರುವುದರಿಂದ ಸ್ಥಳೀಯರು ಆತಂಕದಲ್ಲಿದ್ದಾರೆ.
ಇತ್ತೀಚೆಗೆ ಪಚ್ಚನಾಡಿಯ ಡಂಪಿಂಗ್ ಯಾರ್ಡ್ಗೆ ಬೆಂಕಿ ಬಿದ್ದು ವಾಸನೆಯಿಂದ ಸ್ಥಳೀಯವಾಗಿ ಆತಂಕ ಸೃಷ್ಟಿಯಾಗಿತ್ತು. ಬೆಂಕಿ ವ್ಯಾಪಿಸದಂತೆ ಅಮದು ತ್ಯಾಜ್ಯ ರಾಶಿಗೆ ಮಣ್ಣು ಸುರಿಯಲಾಗಿತ್ತು. ಆದರೆ, ಇದೀಗ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮಣ್ಣಿನ ಮೇಲೆ ಮಳೆನೀರು ನಿಂತು ತ್ಯಾಜ್ಯ ರಾಶಿ ಕುಸಿದು ಬೀಳಲು ಆರಂಭಿಸಿದೆ. ತ್ಯಾಜ್ಯ ರಾಶಿ ಕುಸಿದು ಬೀಳುತ್ತಿರುವುದರಿಂದ ಸ್ಥಳೀಯರನ್ನು ಆತಂಕ್ಕೀಡುಮಾಡಿದೆ.
ಡಂಪಿಂಗ್ ಯಾರ್ಡ್ ಸಮೀಪವಿರುವ ನಿವಾಸಿಗಳಾದ ನಾಗಮ್ಮ, ಸುಲೋಚಿನಿ, ಸುಮತಿ ಮತ್ತು ರಾಮ್ ಭಟ್ ಅವರ ತೋಟದವರೆಗೂ ತ್ಯಾಜ್ಯದ ಗುಡ್ಡೆಯು ಸರಿದಿದೆ. ಕಸದ ರಾಶಿ, ತ್ಯಾಜ್ಯ ಹಾಗೂ ಮಳೆ ನೀರು ಜತೆಯಾಗಿ ಹರಿದ ಪರಿಣಾಮ ಇಲ್ಲಿ ದುರ್ನಾತ ತುಂಬಿಕೊಂಡಿದೆ. ನಿರಂತರ ಸುರಿಯುತ್ತಿರುವ ಮಳೆ ಇದೇ ರೀರಿಯ ಮುಂದುವರಿದಲ್ಲಿ ಇನ್ನಷ್ಟು ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಎನ್ನುವುದು ಸ್ಥಳೀಯರ ಆತಂಕವಾಗಿದೆ.