ಕಾರ್ಕಳ, ಆ 07 (Daijiworld News/MSP): ಹೈಡ್ರೋಲಿಕ್ ಗೇಟ್ ತೆರವುಗೊಳಿಸಿರುವುದರಿಂದ ಮುಂಡ್ಲಿಯಲ್ಲಿ ಎದುರಾಗುತ್ತಿದ್ದ ಕೃತಕನೆರೆಗೆ ಪ್ರಸಕ್ತ ವರ್ಷದಲ್ಲಿ ಮುಕ್ತಿ ದೊರೆತ್ತಿದೆ. ಮುಂಡ್ಲಿ ಅಣೆಕಟ್ಟು ನಿರ್ವಹಣೆಯಲ್ಲಿ ಎದುರಾಗುತ್ತಿದ್ದ ತಾಂತ್ರಿಕ ಅಡಚಣೆಯಿಂದಾಗಿ ಕಳೆದ ಕೆಲ ವರ್ಷಗಳಿಂದ ಇದೇ ಪರಿಸರದಲ್ಲಿ ಕೃತಕನೆರೆ ಕಾಣಿಸಿಕೊಳ್ಳುತ್ತಿತ್ತು. ಪರಿಣಾಮವಾಗಿ ಪರಿಸರದ ಕೃಷಿ ಭೂಮಿಗೆ ನೀರುನುಗ್ಗಿ ಅಪಾರಪ್ರಮಾಣದಲ್ಲಿ ಹಾನಿ ಉಂಟಾಗುತ್ತಿತ್ತು. ಇದನ್ನೆಲ್ಲ ಮನಗಂಡಿರುವ ತಾಲೂಕು ಆಡಳಿತವು ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರಿಂದ ಸಮಸ್ಸೆ ಎದುರಾಗಿಲ್ಲ.
ಮುನ್ನೆಚ್ಚರಿಕೆ ಕ್ರಮ
ಮಳೆಗಾಲದಲ್ಲಿ ಎದುರಾಗುವ ಪ್ರಾಕೃತಿಕ ವಿಕೋಪದ ಬಗ್ಗೆ ಮುನ್ನೆಚ್ಚರಿಕೆ ವಹಿಸಿಕೊಂಡ ತಾಲೂಕು ಆಡಳಿತವು ತಹಶೀಲ್ದಾರ್ ನೇತೃತ್ವದಲ್ಲಿ ವಿಶೇಷ ಸಭೆ ಕರೆ ಆಯೋಜಿಸಲಾಗಿತ್ತು. ವಿದ್ಯುತ್ ಉತ್ಪಾದಕ ಖಾಸಗಿ ಕಂಪೆನಿಯೊಂದು ಮುಂಡ್ಲಿ ಡ್ಯಾಂಗೆ ಅಳವಡಿಸಿದ ಹೈಡ್ರೋಲಿಕ್ ಗೇಟ್ ಅಳವಡಿಸಿದ್ದು, ಮಳೆಗಾಲದ ಸಂದರ್ಭದಲ್ಲಿ ಅವುಗಳನ್ನು ತೆರವುಗೊಳಿಸದೇ ಹೋದುದರಿಂದ ಅಲ್ಲಿ ಕೃತಕ ನೆರೆಗೆ ಕಾರಣವಾಗಿದೆ ಎಂಬ ವರದಿಯ ಆಧಾರದಲ್ಲಿ ಅವುಗಳನ್ನು ಮಳೆಗಾಲದಲ್ಲಿ ತೆರವುಗೋಳಿಸಲೇ ಬೇಕೆಂಬ ನಿರ್ದೇಶನವನ್ನು ತಹಶೀಲ್ದಾರ್ ನೀಡಿದರಲ್ಲದೇ ಅದನ್ನು ಅನುಷ್ಠಾನಗೊಳಿಸಿದರು.
ಮಳೆಗಾಲದಲ್ಲಿ ಉಕ್ಕಿ ಹರಿಯುತ್ತಿದೆ. ಬೇಸಿಗೆಯಲ್ಲಿ ಬತ್ತುತ್ತಿದೆ
ಮಳೆಗಾಲದಲ್ಲಿ ಉಕ್ಕಿ ಹರಿಯುತ್ತಿರುವ ಸ್ವರ್ಣ ನದಿ ಬೇಸಿಗೆ ಸಮೀಪಿಸುತ್ತಿದ್ದಂತೆ ಒಳಹರಿವು ಸಂಪೂರ್ಣ ಕ್ಷೀಣಿಕೊಳ್ಳುತ್ತಾ ಕಡುಬೇಸಿಗೆಯ ಸಂದರ್ಭದಲ್ಲಿ ನದಿ ಸಂಪೂರ್ಣ ಬತ್ತಿ ಹೋಗುತ್ತಿರುವುದರಿಂದ ಕಾರ್ಕಳ ಪುರಸಭೆ, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಸೆ ಎದುರಾಗುತ್ತಿದೆ. 12 ಅಡಿ ಎತ್ತರದ ಮುಂಡ್ಲಿ ಡ್ಯಾಂ ನಲ್ಲಿ ಹೂಳಿನ ಸಂಗ್ರಹವೇ ಹೆಚ್ಚಳವಾಗಿದೆ. ಇದರಿಂದಾಗಿ ನೀರು ಸಂಗ್ರಹಣೆ ಕಡಿಮೆಯಾಗುತ್ತಿರುವುದರಿಂದ ನಗರದ ಪ್ರದೇಶಗಳಿಗೆ ಕುಡಿಯುವ ನೀರು ಪೊರೈಕೆ ಮಾಡಲು ಸಾಧ್ಯವಾಗುವುದಿಲ್ಲ.
ಮುಂಡ್ಲಿಯಲ್ಲಿ ಅಣೆಕಟ್ಟು ನಿರ್ಮಾಣ
1994ರಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ದುರ್ಗಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡ್ಲಿ ಯಲ್ಲಿ ಸ್ವರ್ಣ ನದಿಗೆ ಅಡ್ಡವಾಗಿ ಕಿಂಡಿಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಕೆಲ ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ತಲೆಎತ್ತಿದ್ದ ಜಲವಿದ್ಯುತ್ ಘಟಕದಿಂದಾಗಿ ಮುಂಡ್ಲಿ ಡ್ಯಾಂ ಆಗಿ ಪರಿವರ್ತನೆ ಗೊಂಡಿತು.
ಉಡುಪಿಗೂ ಅಸರೆ
ಮಾಳ ಗ್ರಾಮದ ಮಲ್ಲಾರು, ಮುಳ್ಳೂರು, ಪಟ್ಟಣಹಿತ್ಲು, ಹೇರಂಜೆ,ಕಲ್ಯಾಣಿ,ಎಡಪ್ಪಾಡಿ, ಹೊಯ್ಗೆಹಿತ್ಲು, ಹೆಗ್ಗಡೆಮನೆ ಮತ್ತು ಕಡಂದಲಾಜೆ ಮೊದಲಾದೆಡೆಯ ತೊರೆಗಳು ಪಶ್ಚಿಮಾಭಿಮುಖವಾಗಿ ಹರಿಯುವ ಈ ತೊರೆಗಳೆಲ್ಲವೂ ಕಡಾರಿ(ಮಾಚೊಟ್ಟೆ) ಹೊಳೆಯನ್ನು ಸೇರಿ ಎಣ್ಣೆಹೊಳೆಯನ್ನು ಕೂಡಿಕೊಂಡು ಗ್ರಾಮದ ಹೊರಗಡೆ ಸ್ವರ್ಣ ಎಂಬ ನಾಮಾಂಕಿತದೊಂದಿಗೆ ಪರಿಚಯಿಸಿಕೊಂಡು ಉಡುಪಿಯ ಕಲ್ಯಾಣಪುರದಲ್ಲಿ ಸಮುದ್ರದೊಂದಿಗೆ ಲೀನವಾಗುತ್ತದೆ. ಈ ನಡುವೆ ತೆಳ್ಳಾರಿನ ಮುಂಡ್ಲಿ ಯಲ್ಲಿ ಕಿರುಅಣೆಕಟ್ಟು ನಿರ್ಮಿಸಿ ಕಾರ್ಕಳ ಪುರಸಭಾ ವ್ಯಾಪ್ತಿಗೆ ಹಾಗೂ ಹಿರಿಯಡ್ಕ ಬಜೆಯಲ್ಲಿ ನಿರ್ಮಿಸಿರುವ ಅಣೆಕಟ್ಟು ನಲ್ಲಿ ಸಂಗ್ರಹವಾಗಿರುವ ನೀರನ್ನು ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಸಮಗ್ರವಾಗಿ ಪೊರೈಕೆ ಮಾಡಲಾಗುತ್ತಿದೆ.
ದಾಯ್ಜಿವರ್ಲ್ಡ್ ವರದಿಗೆ ಸ್ಪಂದನೆ
2018 ಜೂನ್ 27ರ ರಾತ್ರಿ ಸುರಿದ ಭಾರೀ ಮಳೆಗೆ ಮುಂಡ್ಲಿ ಡ್ಯಾಂ ಭರ್ತಿ ನೀರು ತುಂಬಿಕೊಂಡಿತು. ಡ್ಯಾಂಗೆ ಅಳವಡಿಸಿದ ಹೈಡ್ರೋಲಿಕ ಗೇಟ್ ತೆರವುಗೊಳಿಸದೇ ಹೋದುದರಿಂದ ಕೃತಕ ನೆರೆ ಕಾಣಿಸಿಕೊಂಡು ಪರಿಸರದ ಕೃಷಿ ನಾಶಕ್ಕೆ ಕಾರಣವಾಗಿತ್ತು. ಈ ಕುರಿತು ಡಾಯ್ಜಿವರ್ಲ್ಡ್ ವಾಹಿನಿ 2018 ಜೂನ್ 29ರ ಸಮಗ್ರ ವರದಿಯೊಂದನ್ನು ಪ್ರಸಾರ ಮಾಡಿ ಜಿಲ್ಲಾಡಳಿತವನ್ನು ಎಚ್ಚರಿಸುವ ಕಾರ್ಯನಡೆಸಿರುವುದನ್ನು ಸ್ಮರಿಸಬಹುದು.