ಕುಂದಾಪುರ ಡಿ 19 : ಹೊನ್ನಾವರದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಪರೇಶ್ ಮೇಸ್ತಾ ಸಾವಿಗೆ ನ್ಯಾಯ ಒದಗಿಸಿಕೊಡಬೇಕೆಂದು ಗಂಗೊಳ್ಳಿಯಲ್ಲಿ ಹಿಂದೂ ಪರ ಸಂಘಟನೆಗಳು ಮತ್ತು ಖಾರ್ವಿ ಸಮುದಾಯದವರಿಂದ ಬೃಹತ್ ಪ್ರತಿಭಟನಾ ಜಾಥಾವನ್ನ ಹಮ್ಮಿಕೊಳ್ಳಲಾಗಿತ್ತು. ಗಂಗೊಳ್ಳಿ ಬಂದರಿನಿಂದ ಹೊರಟ ಪ್ರತಿಭಟನಾ ರ್ಯಾಲಿ ಗಂಗೊಳ್ಳಿಯ ಪ್ರಮುಖ ಬೀದಿಗಳಲ್ಲಿ ಸಾಗಿ, ನಾಯಕವಾಡಿ, ಗುಜ್ಜಾಡಿ ಮುಖಾಂತರ ತ್ರಾಸಿಯವರೆಗೆ ರ್ಯಾಲಿ ಮೂಲಕ ಬಂದು ತಲುಪಿತು.
ಪರೇಶ್ ಹತ್ಯೆಯನ್ನ ಖಂಡಿಸಿ, ಹತ್ಯೆಯ ತನಿಖೆಯ ಹಾದಿ ತಪ್ಪಿಸುತ್ತಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಾಂಗ್ರೇಸ್ ಪಕ್ಷದ ವಿರುದ್ದ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಗಂಗೊಳ್ಳಿಯ ಕೊಡಪಾಡಿ ಮೈದಾನದಲ್ಲಿ ಪ್ರತಿಭಟನಾಕಾರು ಸೇರಿ ಪ್ರತಿಭಟನಾ ಸಭೆ ನಡೆಸಿದರು.
ಪರೇಶ್ ಮೇಸ್ತಾ ಸಾವಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಪ್ರತಿಭಟನಾ ಸಭೆಯನ್ನ ಆರಂಭಿಸಲಾಯಿತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆ.ಪಿ ಉಲ್ಲಾಸ್, ಪರೇಶ್ ಮೇಸ್ತಾ ಸಾವಿನ ಕುರಿತು ಆಕ್ರೋಶ ವ್ಯಕ್ತಪಡಿಸಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂಗಳ ಹತ್ಯೆಗೆ ಪ್ರಚೋದನೆ ನೀಡುತ್ತಿದ್ದಾರೆ, ಇದಕ್ಕೆ ರಾಜ್ಯದಲ್ಲಿ ನಡೆದಿರುವ ಹತ್ಯೆಗಳೇ ಸಾಕ್ಷಿ. ನಿಮಗೆ ಈ ಸಂದರ್ಭ ಎಚ್ಚರಿಕೆ ನೀಡುತ್ತಿದ್ದೇವೆ ಹಿಂದೂಗಳನ್ನ ಕಡೆಗಣಿಸಿದರೆ ಹಿಂದೂಗಳೇ ನಿಮಗೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಆರ್ಎಸ್ಎಸ್ ವಿಭಾಗೀಯ ಮುಖಂಡ ರವಿರಾಜ್ ಕರಬ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂ ಧಮನ ನೀತಿಯನ್ನ ಅನುಸರಿಸುತ್ತಿದೆ. ಪರೇಶ್ ಮೇಸ್ತಾ ಪ್ರಕರಣದಲ್ಲಿ ಹಲ್ಲೇಕೋರರಿಗೆ ಸರ್ಕಾರ ನೇರವಾಗಿ ಬೆಂಬಲ ನೀಡಿದೆ. ಪರೇಶ್ ಸಾವಿನ ನಂತರ ಹಲ್ಲೆಕೋರರು ಅಲ್ಲಿ ಮಚ್ಚುಗಳನ್ನ ಝಳಪಿಸಿದರೂ ಕೂಡ ಪೊಲೀಸ್ ಇಲಾಖೆ ಸುಮ್ಮನೆ ಕುಳಿತಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿಗಳೇ ವಾಹನಗಳನ್ನ ಪುಡಿ ಮಾಡಿ ಕೋಮುಗಲಭೆಯ ಪರಿಣಾಮ ಎಂದು ಬಿಂಬಿಸ ಹೊರಟಿದೆ ಎಂದು ಆರೋಪಿಸಿದರು.
ವಾಸುದೇವ ಗಂಗೊಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಪರೇಶ್ ಹತ್ಯೆ ಪ್ರಕರಣವನ್ನ ಎನ್ಐಎಗೆ ವಹಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಗಂಗೊಳ್ಳಿಯಾಧ್ಯಂತ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಸಾಗಿಬರುವ ಹಾದಿಯಲ್ಲಿ ಸಂಪೂರ್ಣ ಬಂದ್ನ ವಾತಾವರಣದಿಂದ ಕೂಡಿತ್ತು. ಎಲ್ಲಾ ಕಡೆ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲಾಗಿತ್ತು. ಎಸ್.ಪಿ ಸಂಜೀವ್ ಪಾಟೀಲ್ ಗಂಗೊಳ್ಳಿಯಲ್ಲಿ ಮೊಕ್ಕಾಂ ಹೂಡಿದ್ದು, ಖುದ್ದು ನಿಂತು ಬಂದೋಭಸ್ತ್ ಎರ್ಪಡಿಸಿದ್ದರು. ಯಾವುದೇ ಅಹಿತಕರ ಘಟನೆ ಜರುಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಡ್ರೋನ್ ಮತ್ತು ಕ್ಯಾಮಾರಾ ಕಣ್ಗಾವಲನ್ನ ಹಾಕಲಾಗಿತ್ತು. ಚೆಕ್ಪೋಸ್ಟ್ನಲ್ಲಿ ಪ್ರತಿವಾಹನವನ್ನ ತಪಾಸಣೆ ನಡೆಸಿ ವಾಹನಗಳನ್ನ ಗಂಗೊಳ್ಳಿ ಕಡೆಗೆ ಬಿಡಲಾಗುತ್ತಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಭಸ್ತ್ ಎರ್ಪಡಿಸಲಾಗಿತ್ತು.