ಮಂಗಳೂರು, ಆ 08 (Daijiworld News/MSP): ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿ ಹಾಗೂ ಕುಮಾರಧಾರ ನದಿಗಳು ಅಪಾಯದ ಮಟ್ಟದ ಸನಿಹ ಬಂದಿದೆ. ಈ ಹಿನ್ನಲೆಯಲ್ಲಿ ನದಿ ದಡದಲ್ಲಿ ವಾಸಿಸುವ ಜನರು ಎಚ್ಚರದಿಂದಿರಲು ಹಾಗೂ ಸಂಬಂಧಿಸಿದ ಇಲಾಖೆಯ ಕಟ್ಟೆಚ್ಚರ ವಹಿಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚನೆ ನೀಡಿದ್ದಾರೆ.
ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಹಾಗೂ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ನೇತ್ರಾವತಿ ಹಾಗೂ ಕುಮಾರಧಾರಾ ನೀರಿನ ಮಟ್ಟದ ಹೆಚ್ಚಳವಾಗಿದ್ದು ನದಿಗಳು ಅಪಾಯ ಮಟ್ಟ ತುಂಬಿ ಹರಿಯುತ್ತಿದೆ, ಈ ಹಿನ್ನಲೆಯಲ್ಲಿ ಪ್ರಮುಖ ಅಪಾಯ ಸ್ಥಳಗಳಲ್ಲಿ ನೋಡಲ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.
ಬಂಟ್ವಾಳದಲ್ಲಿ ನೇತ್ರಾವತಿ ನದಿಯ ಅಪಾಯದ ಮಟ್ಟ 8.5 ಮೀಟರ್ ಗಳಾಗಿದ್ದು ಗುರುವಾರ ಬೆಳಗ್ಗೆ ನದಿ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ 8.15 ಮೀಟರ್ ದಾಖಲಾಗಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ಅಪಾಯದ ಮಟ್ಟ 31.5 ಮೀಟರ್ ಗಳಾಗಿದ್ದು 29.6 ಮೀಟರ್ ದಾಖಲಾಗಿದೆ. ಕುಮಾರಧಾರ ನದಿಯ ಅಪಾಯದ ಮಟ್ಟ 26.5 ಮೀಟರ್ ಆಗಿದ್ದು ನೀರಿನ ಮಟ್ಟವೂ 26.5 ದಾಖಲಾಗಿದೆ.