ಬಂಟ್ವಾಳ, ಆ 08 (Daijiworld News/MSP): ' ಬ್ಯಾನರ್ ಕದ್ದವರ ಗಮನಕ್ಕೆ ಎಂಬ ಬ್ಯಾನರ್ ' ಒಂದು ಅಳವಡಿಸಿ ಸಾರ್ವಜನಿಕ ಗಮನ ಸೆಳೆಯಲಾಗಿದೆ.
ಹೀಗೊಂದು ಬ್ಯಾನರ್ ನ್ನು ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಸಕೋಡಿ ಪೆಟ್ರೋಲ್ ಪಂಪ್ ಬಸ್ ನಿಲ್ದಾಣ ಮತ್ತು ಕಶೆಕೋಡಿ ಬಸ್ ನಿಲ್ದಾಣ ದಲ್ಲಿ ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಕೋರಿ ಹಾಕಲಾಗಿದ್ದ ಬ್ಯಾನರ್ ನ್ನು ಕಿಡಿಗೇಡಿಗಳು ಕಳವು ಮಾಡಿದ್ದಾರೆ.
ಕಶೆಕೋಡಿ ಸೂರ್ಯ ಭಟ್ ಅವರ ಕಲಾಶ್ರಯದಲ್ಲಿ ನಡೆಯಲಿರುವ ಸಾರ್ಜನಿಕ ವರಮಹಾಲಕ್ಷ್ಮಿ ಪೂಜೆಯ ಬಗ್ಗೆ ಸರ್ವರಿಗೂ ಅಮಂತ್ರಣ ಕೋರಿ ಬುಧವಾರ ಬೆಳಿಗ್ಗೆ ಎರಡು ಬಸ್ ನಿಲ್ದಾಣದಲ್ಲಿ ಬ್ಯಾನರ್ ಹಾಕಲಾಗಿತ್ತು.
ಆದರೆ ರಾತ್ರಿಯಾಗುತ್ತಿದ್ದಂತೆ ಎರಡು ಬ್ಯಾನರ್ ಗಳು ಮಾಯವಾಗಿದೆ. ಯಾರೋ ಕಿಡಿಗೇಡಿಗಳು ಈ ಬ್ಯಾನರ್ ನ್ನು ಕಳವು ಮಾಡಿದ್ದಾರೆ. ಇದು ಬ್ಯಾನರ್ ಕಳವಿನ ಪ್ರಶ್ನೆಯಲ್ಲ, ಇಲ್ಲಿ ನಿರಂತರವಾಗಿ ಕಳವು ನಡೆಯುತ್ತಿದ್ದು ಅವರ ಗಮನಕ್ಕೆ ಬರಲಿ ಎಂದು ಬ್ಯಾನರ್ ಹಾಕಿದ್ದೇನೆ ಎಂದು ಕಲಾಶ್ರಯದ ಮುಖ್ಯಸ್ಥ ಸೂರ್ಯ ಭಟ್ ತಿಳಿಸಿದ್ದಾರೆ.
ಬ್ಯಾನರ್ ನಲ್ಲಿ ಏನಿದೆ : " ಬ್ಯಾನರ್ ಗಳನ್ನು ಕದ್ದವರ ಗಮನಕ್ಕೆ ನಿಮ್ಮ ಮನೆಯವರ ಹೆಣಕ್ಕೆ ಹೊದಿಸಲು ಬಟ್ಟೆಯನ್ನು ಕೇಳಿದ್ದರೆ ಉಚಿತವಾಗಿ ಕೊಡುತ್ತಿದ್ದೆವು, ವರಮಹಾಲಕ್ಮೀ ಪೂಜೆಯ ಬ್ಯಾನರ್ ಗಳನ್ನು ಕದಿಯುವ ಅಗತ್ಯ ವಿರಲಿಲ್ಲ" ಎಂದು ಬರೆಯಲಾಗಿದೆ.
ಕಳ್ಳತನ ನಿರಂತರ: ಇಲ್ಲಿ ಜನರಿಗೆ ಉಪಯೋಗ ಅಗಲಿ ಎಂದು ವಿಶ್ವ ಹಿಂದೂ ಪರಿಷತ್ ಸುವರ್ಣ ಸಂಭ್ರಮದ ಸವಿನೆನಪಿಗಾಗಿ ಕಲಾಶ್ರಯ ಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಶೆಕೊಡಿ ಹಾಗೂ ದಾಸಕೋಡಿ ಪೆಟ್ರೋಲ್ ಪಂಪ್ ಬಳಿ ಎರಡು ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಿ ಅದಕ್ಕೆ ಇಂಟರ್ ಲಾಕ್ ಗಳನ್ನು ಅಳವಡಿಸಲಾಗಿತ್ತು, ಆದರೆ ಅ ಇಂಟರ್ ಲಾಕ್ ಗಳನ್ನು ಕೂಡ ಕಳವು ಮಾಡಲಾಯಿತು. ಬಳಿಕ ಸಾರ್ವಜನಿಕ ರಿಗೆ ಬಾಯಾರಿಕೆ ಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು , ಅ ನೀರಿನ ಡ್ರಮ್ ನ್ನೆ ಕದ್ದು ಕೊಂಡು ಹೋದರು, ಬಸ್ ನಿಲ್ದಾಣದ ಒಳಗೆ ಪ್ರಾಣಿಗಳು ಬರಬಾರದು ಎಂಬ ಉದ್ದೇಶದಿಂದ ಸ್ಟೀಲ್ ರಾಡ್ ಗಳನ್ನು ಹಾಕಲಾಗಿತ್ತು ಅದನ್ನು ಕೊಂಡು ಹೋದರು. ರಾತ್ರಿ ಸಾರ್ವಜನಿಕ ರಿಗೆ ಉಪಯೋಗವಾಗಲೆಂದು ಸೋಲಾರ್ ದಾರಿ ದೀಪದ ವ್ಯವಸ್ಥೆ ಯನ್ನು ಮಾಡಲಾಯಿತು, ಸೋಲಾರ್ ಬ್ಯಾಟರಿ ಹಾಗೂ ದೀಪಗಳನ್ನು ಕದಿಯಲಾಯಿತು. ಈ ರೀತಿಯಲ್ಲಿ ನಿರಂತರವಾಗಿ ಕಳವು ಮಾಡುವ ಕಳ್ಳರ ಕಾಟ ತಡೆಯಲಾರದೆ ಕೊನೆಗೆ ಬ್ಯಾನರ್ ಹಾಕಿದ್ದೇನೆ ಎಂದು ಸಾರ್ವಜನಿಕ ಸೇವಕ ಕಲಾಶ್ರಯ ದ ಸ್ಥಾಪಕ ಸೂರ್ಯ ಭಟ್ ಕಶೆಕೋಡಿ ಹೇಳಿದ್ದಾರೆ.