ಕುಂದಾಪುರ, ಆ 08 (Daijiworld News/MSP) : ಕುಂದಾಪುರದ ಆರ್.ಎನ್.ಶೆಟ್ಟಿ ಪ.ಪೂ.ಕಾಲೇಜಿನ ಪ್ರಥಮ ಪಿ.ಯು ವಿಜ್ಞಾನ ವಿಭಾಗದ ಪಿಸಿಎಂಇನ ವಿದ್ಯಾರ್ಥಿ, ವಂಡ್ಸೆಯ ಶ್ರೀಧರ ಶೆಟ್ಟಿ ಮತ್ತು ಶ್ಯಾಮಲ ಶೆಟ್ಟಿ ದಂಪತಿಗಳ ಪುತ್ರ ಶ್ರೀಶ ಶೆಟ್ಟಿ ವಂಡ್ಸೆ ಇವರು "ಸೌರಶಕ್ತಿ, ವಿದ್ಯುತ್ ಚಾಲಿತ ಸೈಕಲ್ " ನ ಆವಿಷ್ಕಾರ ಮಾಡಿದ್ದಾರೆ. ವಿಜ್ಞಾನ ಕ್ಷೇತ್ರದಲ್ಲಿ ಹೊಸತನವನ್ನು ಹುಡುಕುವ ಈ ವಿದ್ಯಾರ್ಥಿ ಇದೀಗ ಸೈಕಲ್ಗೆ ಸೋಲಾರ್ ಫ್ಯಾನಲ್, ಬ್ಯಾಟರಿ ಅಳವಡಿಸಿ ಯಶಸ್ವಿಯಾಗಿದ್ದಾರೆ.
ತನ್ನಲ್ಲಿರುವ ಸೈಕಲ್ಲನ್ನೇ ಬಳಸಿಕೊಂಡು ಈ ಪ್ರಯೋಗವನ್ನು ಶ್ರೀಶ ಮಾಡಿದ್ದಾರೆ. ಇಲ್ಲಿ 12V 9AMP 2 ಬ್ಯಾಟರಿಗಳನ್ನು ಉಪಯೋಗಿಸಿಕೊಂಡು ಸೈಕಲ್ನ ಹಿಂಭಾಗದಲ್ಲಿ ಸೋಲಾರ್ ಫ್ಯಾನಲ್ ಅಳವಡಿಕೆ ಮಾಡಿದ್ದಾರೆ. ಸೋಲಾರ್ ಫ್ಯಾನಲ್ ಮೂಲಕ ಶಕ್ತಿ ಬ್ಯಾಟರಿಯಲ್ಲಿ ಸಂಗ್ರಹವಾಗುತ್ತದೆ. ವಿದ್ಯುಚ್ಚಕ್ತಿಯಿಂದಲೂ ಚಾರ್ಜ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಸೋಲಾರ್ ಅಥವಾ ಮನೆಯ ವಿದ್ಯುತ್ನಿಂದಲೂ ಚಾರ್ಜ್ ಮಾಡಬಹುದಾಗಿದೆ.
೨೪ವೋಲ್ಟ್ ೨೫೦ ವ್ಯಾಟ್ನ ಮೋಟರ್, ಕಂಟ್ರೋಲರ್ ಹಾಗೂ Throttleನ್ನು ಬಳಸಲಾಗಿದೆ. ಒಂದು ಬಾರಿ ಪೂರ್ತಿ ಚಾರ್ಜ್ ಆದರೆ ೫೦ಕ್ಕೂ ಹೆಚ್ಚು ಕಿ.ಮೀ ಸಂಚರಿಸಬಹುದು. ಇದು ಗಂಟೆಗೆ ೩೦ ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಮಧ್ಯೆ ಎಲ್ಲಿಯಾದರೂ ಚಾರ್ಜ್ ಖಾಲಿಯಾದರೆ ಪೆಡ್ಲ್ ಮೂಲಕ ಕ್ರಮಿಸಬಹುದು. ಈ ಸೈಕಲ್ಗೆ ಬೈಕ್ನಂತೆ ಕೀ ಸೆಟ್ ಫಿಕ್ಸ್ ಮಾಡಲಾಗಿದೆ. ಇದರಿಂದ ಮೋಟರನ್ನು ಕೀ ಇಲ್ಲದೆ ಅನ್ ಮಾಡಲಾಗುವುದಿಲ್ಲ. ಬ್ಯಾಟರಿಯ ಸುರಕ್ಷತೆಯ ದೃಷ್ಟಿಯಿಂದ ಬ್ಯಾಟರಿ ಬಾಕ್ಸ್ ಮಾಡಲಾಗಿದೆ.
ಯಾವುದೇ ಹಳೆಯ ಸೈಕಲ್ ಈ ವ್ಯವಸ್ಥೆಯನ್ನು ಇದನ್ನು ಫಿಕ್ಸ್ ಮಾಡಬಹುದಾಗಿದೆ. ವೆಲ್ಡಿಂಗ್ಶಾಫ್ನಲ್ಲಿ ಸೋಲಾರ್ ಫ್ಯಾನಲ್ ಮತ್ತು ಬ್ಯಾಟರಿ ಫಿಕ್ಸ್ ಮಾಡಲು ಸ್ಟ್ಯಾಂಡ್ ಮಾಡಿಸಿಕೊಂಡು ಮಾಮೂಲಿ ಸೈಕಲ್ಗೆ ಅಳವಡಿಸಬಹುದು. ಬ್ಯಾಟರಿ, ಸೋಲಾರ್ ಫ್ಯಾನಲ್, ಮೋಟರ್ ಕಂಟ್ರೋಲರ್ ಎಲ್ಲಾ ಸೇರಿ ಸುಮಾರು 10 ಸಾವಿರ ತಗಲುತ್ತದೆ. ಬ್ಯಾಟರಿಯನ್ನು ಯಾವುದೇ ಗ್ಯಾರೇಜ್ಗಳಲ್ಲಿ ಬೇಕಾದರೂ ಚಾರ್ಜ್ ಮಾಡಬಹುದಾಗಿದೆ.
ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರುವ ಶ್ರೀಶ ಶೆಟ್ಟಿ ಛದ್ಮವೇಷ, ಏಕಪಾತ್ರಾಭಿನಯಗಳಲ್ಲಿ ಸಾಧನೆ ಮಾಡಿದ್ದಾನೆ. ಕಳೆದ ವರ್ಷ ಬಿಡುಗಡೆಯಾದ ರಮೇಶ ಭಟ್ ಅವರ ’ಗಂಧದ ಕುಡಿ’ ಚಲನಚಿತ್ರದಲ್ಲಿ ಪಾತ್ರ ನಿರ್ವಹಿಸಿ, ಸೈ ಎನಿಸಿಕೊಂಡಿದ್ದಾನೆ.