ಮಂಗಳೂರು, ಆ 08 (DaijiworldNews/SM): ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಭಾರೀ ಮಳೆಗೆ ಮಂಗಳೂರು ಪಚ್ಚನಾಡಿ ಡಂಪಿಂಗ್ ಯಾರ್ಡ್ ನಲ್ಲಿ ನಿನ್ನೆಯಿಂದ ಕಸದ ರಾಶಿ ಕುಸಿತವಾಗುತ್ತಿದ್ದು ಇಂದು ಕೂಡ ಮುಂದುವರಿದಿದೆ.
ಪರಿಣಾಮವಾಗಿ ಸ್ಥಳೀಯ ಮೂರು ಮನೆಗಳು ಸಂಪೂರ್ಣ ನಾಶವಾಗಿದ್ದು, 10 ಮನೆಗಳಿಗೆ ಹಾನಿಯಾಗಿದ್ದು, ಎಕರೆಗಟ್ಟೆಲೆ ಕೃಷಿ ಭೂಮಿ ನಾಶವಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭೇಟಿ ನೀಡಿ ಸಮಸ್ಯೆ ಬಗ್ಗೆ ಪರಿಶೀಲಿಸಿ ನಿವೇಶನ ಕಳೆದುಕೊಂಡವರಿಗೆ ನಿವೇಶನ ಒದಗಿಸುವ ಭರವಸೆ ನೀಡಿದ್ದಾರೆ.
ಇನ್ನೂ ಸ್ಥಳಿಯ ಮನೆ ಅಂಗಳಕ್ಕೆ ಕಸದ ರಾಶಿ ಬಿದ್ದಿದೆ. ಸ್ಥಳೀಯ ಬಾವಿಗಳಿಗೂ ಕಸದ ರಾಶಿ ಬಿದ್ದು ಬಾವಿಗಳು ಮುಚ್ಚಿ ಹೋಗಿವೆ. ಭಾರೀ ಮಳೆಗೆ ಮಂಗಳೂರು ಪಚ್ಚನಾಡಿ ಡಂಪಿಂಗ್ ಯಾರ್ಡ್'ನಲ್ಲಿ ಮಣ್ಣು ಸೇರಿದಂತೆ ತ್ಯಾಜ್ಯದ ರಾಶಿ ಸಂಪೂರ್ಣವಾಗಿ ಕುಸಿದಿದ್ದು, ಪಚ್ಚನಾಡಿ ಬಳಿಯ ಮಂದಾರದಲ್ಲಿರುವ ಮನೆ ಸೇರಿದಂತೆ ಅಪಾರದ ಕೃಷಿ ಭೂಮಿಗೆ ಹಾನಿಯಾಗಿದೆ.
ಎಕರೆಗಟ್ಟಲೆ ಕೃಷಿ ಭೂಮಿ ಸಂಪೂರ್ಣವಾಗಿ ಹಾನಿಗೊಳಗಾಗಿರುವುದರಿಂದ ಸ್ಥಳೀಯರು ಆತಂಕದಲ್ಲಿದ್ದಾರೆ. ಇನ್ನು ಡಂಪಿಂಗ್ ಯಾರ್ಡ್ ನಲ್ಲಿ ತೆರವು ಕಾರ್ಯಾಚರಣೆ ಮುಂದುವರಿದಿದೆ.