ಬಂಟ್ವಾಳ, ಆ 08 (DaijiworldNews/SM): ನಿರಂತರ ಮಳೆಯಿಂದ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿರುವ ನೇತ್ರಾವತಿ ನದಿ ನೀರಿನಲ್ಲಿ ಯುವಕರು ಈಜಾಟ, ನೀರಾಟ ಆಡುವ ಮೂಲಕ ದುಸ್ಸಾಹಸಕ್ಕೆ ಮುಂದಾದ ಘಟನೆಯೊಂದು ನೇತ್ರಾವತಿ ನದಿಯಲ್ಲಿ ಕಂಡು ಬಂದಿದೆ.
ನೇತ್ರಾವತಿ ನದಿ ಬಹಳಷ್ಟು ಭಯಾನಕವಾಗಿ ಹರಿಯುತ್ತಿದ್ದು, ಯಾವುದೇ ಹಂತದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಗಳಿವೆ. ಘಟ್ಟ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಮಾರಧಾರ ಹಾಗೂ ನೇತ್ರಾವತಿ ನದಿಯಲ್ಲಿ ಹರಿವು ಹೆಚ್ಚುತ್ತಲೇ ಇದೆ.
ಈ ನಡುವೆ ಸ್ಥಳೀಯ ಈಜುಪಟು ಯುವಕರು ಪಾಣೆಮಂಗಳೂರಿನ ಹಳೆ ಉಕ್ಕಿನ ಸೇತುವೆಯ ಮೇಲ್ಭಾಗದಿಂದ ತುಂಬಿ ಹರಿಯುತ್ತಿರುವ ನೇತ್ರಾವತಿ ನದಿ ನೀರಿಗೆ ಧುಮುಕುತ್ತಿರುವ ಭಯಾನಕ ದೃಶ್ಯದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ.
ಸೇತುವೆಯ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸಿ ಈ ದುಸ್ಸಾಹಸ ಮೆರೆದಿದ್ದು, ತೀವ್ರ ಟೀಕೆಗೆ ಒಳಗಾಗಿದ್ದಾರೆ. ಇದರಿಂದಾಗಿ ಸೇತುವೆಯ ಮೇಲೆ ವಾಹನಗಳ ಸಂಚಾರಕ್ಕೂ ಅಡ್ಡಿಯುಂಟಾಗಿದೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಪೊಲೀಸರ ಎದುರಿನಲ್ಲಿಯೇ ನೀರಿಗೆ ಹಾರುವ ದೃಶ್ಯಕಂಡು ಬಂದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.