ಮಂಗಳೂರು, ಆ 08 (DaijiworldNews/SM): ನೆರೆ ನೀರಿಗೆ ಬಿದ್ದು, 18 ತಿಂಗಳ ಮಗುವೊಂದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ನಗರದ ಜಪ್ಪಿನಮೊಗರುವಿನಲ್ಲಿ ಆಗಸ್ಟ್ 8ರ ಗುರುವಾರ ನಡೆದಿದೆ. ಅಂಜನ್ ಮೃತಪಟ್ಟ ಮಗು.
ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿಗಳಾದ ರವಿ ಹಾಗೂ ಜ್ಯೋತಿ ದಂಪತಿಯ ಪುತ್ರ ಅಂಜನ್. ರವಿ ಮೀನುಗಾರರಾಗಿದ್ದು, ಪ್ರತಿನಿತ್ಯ ಮೀನುಗಾರಿಕೆಗೆ ತೆರಳುತ್ತಿದ್ದರು. ಮೂಲಗಳ ಪ್ರಕಾರ ಜೋರಾಗಿ ಮಳೆ ಸುರಿಯುತ್ತಿದ್ದ ಸಂದರ್ಭ ಅಂಜನ್ ತನ್ನ ಪೋಷಕರೊಂದಿಗೆ ಮಲಗಿದ್ದ. ಆದರೆ, ಏಕಾಏಕಿ ಎದ್ದ ಅಂಜನ್ ನೀರಿನಲ್ಲಿ ನಡೆದುಕೊಂಡು ತೆರಳಿದ್ದಾನೆ. ಈ ವೇಳೆ ನೆರೆ ನೀರಿಗೆ ಸಿಲುಕಿದ ಬಾಲಕ ಕೊಚ್ಚಿ ಹೋಗಿದ್ದಾನೆ.
ಪೋಷಕರು ಎದ್ದು ನೋಡಿದಾಗ ಮಗ ಇಲ್ಲದಿರುವುದು ತಿಳಿದು ಹುಡುಕಾಟ ನಡೆಸಿದಾಗಿ ನೀರಿನಲ್ಲಿ ಕೊಚ್ಚಿ ಹೋಗಿರುವುದು ತಿಳಿದು ಬಂದಿದೆ. ಬಳಿಕ ಮಗುವಿನ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.