ಉಳ್ಳಾಲ, ಏ. 01 (DaijiworldNews/AK): ಶಿಶು ಮರಣ ಪ್ರಮಾಣ ಹಾಗೂ ತಾಯಿ ಮರಣ ಪ್ರಮಾಣ ಕಡಿಮೆ ಇರುವ ಸಮಾಜವೇ ನಿಜವಾದ ಆರೋಗ್ಯವಂತ ಸಮಾಜ. ಗರ್ಭಿಣಿಯರ ಸಮರ್ಪಕ ಆರೈಕೆ, ಸರಿಯಾದ ಪೌಷ್ಠಿಕ ಆಹಾರ, ರಕ್ತಹೀನತೆ ಹಾಗೂ ಸೋಂಕುಗಳನ್ನು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದರಿಂದ ಶಿಶು ಮರಣ ಪ್ರಮಾಣವನ್ನು ಬಹುಪಾಲು ತಡೆಗಟ್ಟಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅಭಿಪ್ರಾಯಪಟ್ಟರು.



ಅವರು ದೇರಳಕಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಚಿಂತನಾ ಸಭಾಂಗಣದಲ್ಲಿ ಬುಧವಾರ ನಡೆದ “ಆಶಾ ಸಬಲೀಕರಣ : ಸುರಕ್ಷಿತ ತಾಯಂದಿರು, ಆರೋಗ್ಯವಾದ ಶಿಶುಗಳು” ಎಂಬ ಶೀರ್ಷಿಕೆಯ ಆಶಾ ಕಾರ್ಯಕರ್ತೆಯರ ಸಬಲೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗರ್ಭಧಾರಣೆಯ ಆರಂಭಿಕ ಹಂತದಲ್ಲೇ ನೋಂದಣಿ ಅತ್ಯಂತ ಅಗತ್ಯವಾಗಿದ್ದು, ಮೊದಲ 12 ವಾರಗಳೊಳಗೆ ನೋಂದಣಿ ಮಾಡಿಸಬೇಕು ಎಂಬ ನಿಯಮವಿತ್ತು ಆದರೆ ಈಗ 10 ವಾರಗಳೊಳಗೆ ನೋಂದಣಿ ಪ್ರಕ್ರಿಯೆ ಆಗಬೇಕು ಎಂಬ ನಿಯವಿದ್ದು ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ನಡೆಯಬೇಕಿದೆ ಎಂದರು.
ಗರ್ಭಿಣಿಯರಿಗೆ ಸರಿಯಾದ ಸಮಯದಲ್ಲಿ ಆರೋಗ್ಯ ತಪಾಸಣೆ, ಪೌಷ್ಠಿಕ ಆಹಾರ ಹಾಗೂ ಸೋಂಕುಗಳಿಗೆ ಚಿಕಿತ್ಸೆ ಪಡೆಯದಿದ್ದರೆ ಕಡಿಮೆ ತೂಕದ ಮಗು ಹಾಗೂ ಅವಧಿಗೆ ಮುನ್ನ ಹೆರಿಗೆ ಸಂಭವಿಸುವ ಸಾಧ್ಯತೆ ಹೆಚ್ಚುತ್ತದೆ. ಇದು ಶಿಶು ಮರಣಕ್ಕೆ ಪ್ರಮುಖ ಕಾರಣವಾಗುತ್ತದೆ ಎಂದು ತಿಳಿಸಿದರು.
ಸುಮಾರು 15 ಜಿಲ್ಲೆಗಳು ಹಾಗೂ ಅಂತರರಾಜ್ಯದ 2 ಜಿಲ್ಲೆಗಳಿಂದ ಜನರು ಮಂಗಳೂರಿಗೆ ವೈದ್ಯಕೀಯ ಸೌಲಭ್ಯಕ್ಕಾಗಿ ಬರುತ್ತಿದ್ದಾರೆ. ಗರ್ಭಿಣಿ ಹಾಗೂ ಶಿಶು ಆರೈಕೆಯ ಕುರಿತು ಇಲಾಖೆಯಿಂದ ಈಗಾಗಲೇ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ .ಇಂತಹ ಮಹತ್ವದ ವಿಷಯಗಳ ಕುರಿತು ಜನರಿಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಿರುವ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಅಭಿನಂದನೆ ಸಲ್ಲಿಸಿದರು.
ಕ್ಷೇಮ ಡೀನ್ ಡಾ. ಸಂದೀಪ್ ರೈ ಮಾತನಾಡಿ ಸ್ತ್ರೀರೋಗ ಹಾಗೂ ಮಕ್ಕಳ ವಿಭಾಗಕ್ಕೆ ಬರುವ ರೋಗಿಗಳಿಗೆ ಅಗತ್ಯವಾದ ಚಿಕಿತ್ಸೆ ಹಾಗೂ ಆರೋಗ್ಯ ಮಾಹಿತಿಯನ್ನು ನಾವು ನಿರಂತರವಾಗಿ ನೀಡುತ್ತಾ ಇದ್ದೇವೆ. ಕೋವಿಡ್ ಸಮಯದಲ್ಲಿ ಆಶಾ ಕಾರ್ಯಕರ್ತೆಯರೊಂದಿಗೆ ಕೈಜೋಡಿಸಿ ನಾವು ಬಹಳಷ್ಟು ಸೇವೆ ಸಲ್ಲಿಸಿದ್ದೇವೆ. ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳ ಸಹಕಾರದಿಂದ ಕೋವಿಡ್ ರೋಗಿಗೆ ಚಿಕಿತ್ಸೆ ನೀಡಿದ ಮೊದಲ ಆಸ್ಪತ್ರೆಯಾಗಿ ಕೆ.ಎಸ್. ಹೆಗ್ಡೆ ಆಸ್ಪತ್ರೆ ಗುರುತಿಸಿಕೊಂಡಿತು.ಆ ಸಮಯದಲ್ಲಿ ಎಲ್ಲೂ ಸಾಧ್ಯವಾಗದ ಚಿಕಿತ್ಸೆಯನ್ನು ನಾವು ಇಲ್ಲಿ ಯಶಸ್ವಿಯಾಗಿ ನೀಡಿದ್ದೇವೆ. ಆದ ಕಾರಣದಿಂದ ಬೇರೆ ಜಿಲ್ಲೆಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ನಮ್ಮ ಆಸ್ಪತ್ರೆಗೆ ಬರುತ್ತಿದ್ದರು. ಆ ಸಮಯದಲ್ಲಿ ಮಾತ್ರವಲ್ಲದೆ ಇಂದಿಗೂ ಕೂಡ ವಿವಿಧ ಜಿಲ್ಲೆಗಳಿಂದ ಜನರು ಚಿಕಿತ್ಸೆಗಾಗಿ ಬರುತ್ತಿದ್ದಾರೆ.
ಆಶಾ ಕಾರ್ಯಕರ್ತೆಯರು ಕೂಡ ಬೇರೆ ಜಿಲ್ಲೆಗಳಿಂದ ಇಲ್ಲಿ ಆಗಮಿಸುತ್ತಿದ್ದರು. ಸಾಮಾನ್ಯವಾಗಿ ಆಶಾ ಕಾರ್ಯಕರ್ತೆಯರನ್ನು ನಾವು ನೇರವಾಗಿ ನೋಡಲು ಅವಕಾಶ ಕಡಿಮೆ ಸಿಗುತ್ತದೆ. ಆದರೆ ನೀವು ಜನರ ನಡುವೆ ಸದಾ ಕೆಲಸ ಮಾಡುತ್ತಿರುವವರು. ಆದ್ದರಿಂದ ಆಶಾ ಕಾರ್ಯಕರ್ತೆಯರು ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು.ನಮ್ಮ ಆಸ್ಪತ್ರೆಯಿಂದ ಅಗತ್ಯವಿರುವ ಎಲ್ಲ ರೀತಿಯ ಸಹಾಯ ಹಾಗೂ ಚಿಕಿತ್ಸಾ ಸೇವೆಗಳನ್ನು ನೀಡಲು ನಾವು ಸದಾ ಸಿದ್ಧರಾಗಿದ್ದೇವೆ. ಎಂದರು.
ಕ್ಷೇಮ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸುಮಲತಾ. ಆರ್ ಶೆಟ್ಟಿ,ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನ ಕುಮಾರ್ ಶೆಟ್ಟಿ, ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಸೀಮಾ ಪವಾಮನ್ ಎಸ್., ಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಧೃತಿಮಾನ್ ಶೆಟ್ಟಿ ಉಪಸ್ಥಿತರಿದ್ದರು.
ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ರಾಹುಲ್ ಹೆಗ್ಡೆ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಮೆಡಿಕೋ ಸಾಮಾಜಿಕ ಕಾರ್ಯಕರ್ತ ರಾಜಾರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಮುದಾಯ ವೈದ್ಯಕೀಯ ವಿಭಾಗದ ಮೆಡಿಕೋ ಸಾಮಾಜಿಕ ಕಾರ್ಯಕರ್ತ ರವಿ ಕೆ. ವಂದಿಸಿದರು.
ಮಂಚಿ, ನಾಟೇಕಲ್, ಪುದು ಅಂಬ್ಲಮೊಗರು, ಕುರ್ನಾಡು ಹಾಗೂ ಬೊಳಿಯಾರು ಪ್ರದೇಶಗಳ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಸೂತಿ ಹಾಗೂ ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನ ಕುಮಾರ್ ಶೆಟ್ಟಿತಾಯಿ ಆರೈಕೆ / ಗರ್ಭಿಣಿ ತಾಯಿ ಆರೈಕೆಯ ಬಗ್ಗೆ ಹಾಗೂ ನವಜಾತ ಶಿಶು ಆರೈಕೆಯ ಬಗ್ಗೆ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಸೀಮಾ ಪವಾಮನ್ ಎಸ್ ಮತ್ತು ಮಕ್ಕಳ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಧೃತಿಮಾನ್ ಶೆಟ್ಟಿ ಮಾಹಿತಿಯನ್ನು ನೀಡಿದರು.
2025ರ ಏಪ್ರಿಲ್ನಿಂದ ನಿನ್ನೆವರೆಗೆ ಶಿಶು ಮರಣ ಪ್ರಮಾಣದ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 15 ಶಿಶು ಮರಣ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 6 ಪ್ರಕರಣಗಳು ನಮ್ಮ ಜಿಲ್ಲೆಗೆ ಸಂಬಂಧಿಸಿದರೆ, ಉಳಿದವು ಬೇರೆ ಜಿಲ್ಲೆಗಳಿಗೆ ಸೇರಿದವು. ಅವುಗಳಲ್ಲಿ 3 ಪ್ರಕರಣಗಳು ಕಾಸರಗೋಡು ಪ್ರದೇಶಕ್ಕೆ ಸೇರಿವೆ. ಅಪೌಷ್ಟಿಕತೆ, ಗರ್ಭಾವಸ್ಥೆಯಲ್ಲಿನ ರಕ್ತಹೀನತೆ ಹಾಗೂ ಜನನಾಂಗ ಮಾರ್ಗದ ಸೋಂಕುಗಳು ಶಿಶು ಮರಣಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಮೂರು ಅಂಶಗಳನ್ನು ಸರಿಯಾದ ರೀತಿಯಲ್ಲಿ ತಡೆಗಟ್ಟುವ ಮೂಲಕ ಶಿಶು ಮರಣವನ್ನು ಕಡಿಮೆ ಮಾಡಬಹುದು .