ಬಂಟ್ವಾಳ, ಏ. 02 (DaijiworldNews/AA): ಮಗನ ಹೊಸ ಸೈಕಲ್ಗೆ ಗಾಳಿ ಹಾಕಿಸಲು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೊಲೆರೊ ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾಷ್ಟ್ರೀಯ ಹೆದ್ದಾರಿ 75ರ ಕೈಕಂಬದ ಶಾಂತಿ ಅಂಗಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಶಾಂತಿ ಅಂಗಡಿ ನಿವಾಸಿ ಗಾಡ್ವಿನ್ ಪಿಂಟೊ (49) ಎಂದು ಗುರುತಿಸಲಾಗಿದೆ.
ಗಾಡ್ವಿನ್ ಅವರು ಮಂಗಳವಾರವಷ್ಟೇ ತನ್ನ ಮಕ್ಕಳಿಗೆ ಹೊಸ ಸೈಕಲ್ ತಂದಿದ್ದರು. ಸೈಕಲ್ ಟೈರ್ನಲ್ಲಿ ಗಾಳಿ ಇಲ್ಲದ ಕಾರಣ, ಬುಧವಾರ ಸಮೀಪದ ಸೈಕಲ್ ಅಂಗಡಿಗೆ ಗಾಳಿ ಹಾಕಿಸಲು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಬೊಲೆರೊ ಪಿಕಪ್ ವಾಹನ ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಗಾಡ್ವಿನ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಗಾಡ್ವಿನ್ ಅವರು ಬಿ.ಸಿ.ರೋಡ್ನ ತಲಪಾಡಿಯಲ್ಲಿ ವಾಹನ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.