ಮಂಗಳೂರು, ಏ. 02 (DaijiworldNews/AA): ಕೋವಿಡ್ ಅವಧಿಯಲ್ಲಿ ಮಂಗಳೂರಿಗೆ ವಿಶೇಷ ಚಾರ್ಟರ್ವಿಮಾನಗಳ ಕಾರ್ಯಾಚರಣೆ ನಡೆಸಿದ್ದ ಜಜೀರಾ ಏರ್ವೇಸ್, ಇದೀಗ ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ವೇಳೆ ಕುವೈತ್ ಮತ್ತು ಮಂಗಳೂರು ನಡುವೆ ತನ್ನ ಸೇವೆಗಳನ್ನು ಪುನರಾರಂಭಿಸಲು ನಿರ್ಧರಿಸಿದೆ.

ಜಜೀರಾ ಏರ್ವೇಸ್ನ ಸಿಇಒ ಭರತನ್ ಪಶುಪತಿ ಅವರು ಮಾತನಾಡಿ, ಏಪ್ರಿಲ್ 8 ರಿಂದ ಕೋಝಿಕ್ಕೋಡ್ಗೆ ವಾರಕ್ಕೆ ಎರಡು ಬಾರಿ (ಭಾನುವಾರ ಮತ್ತು ಬುಧವಾರ) ವಿಮಾನಗಳು ಸಂಚರಿಸಲಿವೆ. ತಿರುಚಿರಾಪಳ್ಳಿಗೆ ಏಪ್ರಿಲ್ 7 ರಿಂದ ಭಾನುವಾರ ಮತ್ತು ಮಂಗಳವಾರ ಹಾಗೂ ಕಣ್ಣೂರಿಗೆ ಏಪ್ರಿಲ್ 14 ರಿಂದ ಮಂಗಳವಾರ ಮತ್ತು ಶುಕ್ರವಾರದಂದು ಸೇವೆಗಳು ಆರಂಭವಾಗಲಿವೆ ಎಂದು ತಿಳಿಸಿದರು.
ಮಾರ್ಚ್ 20 ರಿಂದ ಭಾರತಕ್ಕೆ ಕಾರ್ಯಾಚರಣೆಯನ್ನು ಪುನರಾರಂಭಿಸಿದ ನಂತರ, ಏರ್ಲೈನ್ ಇದುವರೆಗೆ 11,000 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ದಿದೆ. ಈ ವಿಸ್ತರಣೆಯಿಂದಾಗಿ ದಕ್ಷಿಣ ಭಾರತದ ಪ್ರಯಾಣಿಕರು ತಮ್ಮ ನಗರಗಳಿಗೆ ಹತ್ತಿರವಿರುವ ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸಲು ಸುಲಭವಾಗಲಿದೆ. ಹೊಸ ಮಾರ್ಗಗಳ ಸೇರ್ಪಡೆಯೊಂದಿಗೆ ಭಾರತದಲ್ಲಿ ಜಜೀರಾ ಏರ್ವೇಸ್ನ ಸೇವೆ ಇದೀಗ 12 ನಗರಗಳಲ್ಲಿ ಲಭ್ಯವಿದೆ.
ಪ್ರಸ್ತುತ ಅಹಮದಾಬಾದ್, ಬೆಂಗಳೂರು, ಚೆನ್ನೈ, ನವದೆಹಲಿ, ಹೈದರಾಬಾದ್, ಕೊಚ್ಚಿ, ಮುಂಬೈ ಮತ್ತು ತಿರುವನಂತಪುರಕ್ಕೆ ಅಸ್ತಿತ್ವದಲ್ಲಿರುವ ಸೇವೆಗಳ ಜೊತೆಗೆ ಈ ಹೊಸ ಮಾರ್ಗಗಳು ಸೇರ್ಪಡೆಯಾಗಲಿವೆ. ಇದು ಕುವೈತ್ನಲ್ಲಿರುವ ದೊಡ್ಡ ಮಟ್ಟದ ಭಾರತೀಯ ಸಮುದಾಯದ ಪ್ರಯಾಣಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದು ಅವರು ತಿಳಿಸಿದ್ದಾರೆ.