ಉಡುಪಿ, ಏ. 02 (DaijiworldNews/AK): ಮದುವೆಯಾದ ಒಂದೇ ತಿಂಗಳಿಗೆ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಕಾರ್ಕಳದಲ್ಲಿ ನಡೆದಿತ್ತು.

ಮಗನ ಸಾವಿಗೆ ಆತನ ಪತ್ನಿ ಸೌಮ್ಯಾ ಶೆಟ್ಟಿಯೇ ಕಾರಣ ಎಂಬ ಗಂಭೀರ ಆರೋಪವನ್ನು ಸುದೀಪ್ ಪೋಷಕರು ಮಾಡಿದ್ದರು. ಆದರೀಗ ತನ್ನ ಮೇಲಿನ ಆರೋಪಗಳಿಗೆ ಸ್ವತಃ ಸೌಮ್ಯಾ ಶೆಟ್ಟಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್ ಹೆತ್ತವರ ಆರೋಪ ಅಲ್ಲಗಳೆದಿರುವ ಈಕೆ, ಪತಿಯ ಸಾವಿಗೆ ತಾನು ಕಾರಣಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದೀಪ್ ಸಾವಿನ ನಂತರ, ಅವರ ಪೋಷಕರು ಸೌಮ್ಯಾ ಅವರ ಮೇಲೆ ಸಾರ್ವಜನಿಕವಾಗಿ ಆರೋಪ ಮಾಡಿದ್ದರು, ಅವರ ತಂದೆ ದಾಮೋದರ್ ಅವರು ಸೌಮ್ಯಾಳ ಹಿಂದಿನ ಪರಿಚಯಸ್ಥ ಎಂದು ಹೇಳಿಕೊಂಡ ವೇಣು ಶೆಟ್ಟಿ ಕೂಡ ಹಲವಾರು ಆರೋಪಗಳನ್ನು ಹೊರಿಸಿದ್ದರು. ಇದಲ್ಲದೆ, ಸುದೀಪ್ ಅವರ ತಾಯಿ ಪುಷ್ಪಲತಾ ಶೆಟ್ಟಿ ಅವರು ಸೌಮ್ಯಾಳನ್ನು ನೆಲ್ಯಾಡಿಯಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆಂದು ಆರೋಪಿಸಿ ತಮ್ಮ ಮಗನ ಸಾವಿಗೆ ಸೌಮ್ಯಾಳನ್ನೇ ಹೊಣೆಗಾರರನ್ನಾಗಿ ಮಾಡಿದ್ದರು.
ಸುದೀಪ್ ಪೋಷಕರು ಹೇಳುವಂತೆ ನೆಲ್ಯಾಡಿಯಲ್ಲಿ ನಾನು ರಂಪಾಟ ಮಾಡಿಲ್ಲ. ವಿಷಯ ಹಾಕಿ ಸುದೀಪ್ರನ್ನು ಕೊಂದಿಲ್ಲ. ಬದಲಾಗಿ ಮನೆಯವರ ಕಿರುಕುಳದಿಂದಲೇ ಸುದೀಪ್ ಆತ್ಮಹತ್ಯೆ ಮಾಡಿಕೊಂಡಿರಬಹುದು. ಸುದೀಪ್ ಮೊಬೈಲ್ ಸಂಪರ್ಕಕ್ಕೆ ಸಿಗದ ಕಾರಣ ಆತಂಕಗೊಂಡು ತಾನು ನೆಲ್ಯಾಡಿಗೆ ತೆರಳಿದ್ದೆ. ಅವರು ಹೇಳುವಂತೆ ತಾನು ಯಾವುದೇ ರಂಪಾಟ ನಡೆಸಿಲ್ಲ. ಬೇಕಿದ್ದರೆ ಸಿಸಿ ಕ್ಯಾಮರಾ ದೃಶ್ಯಾವಳಿಗಳ ಪರಿಶೀಲನೆ ಮಾಡಿ. ಸುದೀಪ್ ತಾಯಿ ನನಗೆ ಕೆಟ್ಟ ಭಾಷೆಯಲ್ಲಿ ಬೈದ ಕಾರಣ ಆ ವೇಳೆ ತಾನು ಕಿರುಚಾಡಿದ್ದು ನಿಜ. ನಮ್ಮ ಮನೆಯಲ್ಲಿಯೇ ಇದ್ದ ಸುದೀಪ್ ಮಾರ್ಚ್ 16ರಂದು ನೆಲ್ಯಾಡಿಗೆ ತೆರಳಿದ್ದರು. ತಂದೆಯ ಮನೆಗೆ ಹೋದ ನಂತರ ನನಗೆ ಸಮಸ್ಯೆ ಆಗಿದೆ. ನನ್ನ ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ ಎಂದಿದ್ದರು. ಒಂದು ವೇಳೆ ಅವರು ಒಪ್ಪದಿದ್ದರೆ ನಿಮ್ಮ ಮನೆಯಲ್ಲಿ ಒಪ್ಪುತ್ತಾರಲ್ಲ ಎಂದು ಕೇಳಿದ್ದರು.
ತಂದೆಯ ಮನೆಗೆ ಹೋಗಿ ಬಂದ ನಂತರ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಅವರ ಮನೆಯವರೇ ಆತ್ಮಹತ್ಯೆಗೆ ಪ್ರಚೋದನೆ ನೀಡಿರಬೇಕು ಎಂದು ಸೌಮ್ಯಾ ಆರೋಪಿಸಿದ್ದಾರೆ.
ವೇಣು ಶೆಟ್ಟಿ ಆರೋಪಗಳಿಗೂ ಉತ್ತರಿಸಿರುವ ಸೌಮ್ಯಾ, ನಾವಿಬ್ಬರೂ ರಂಗಭೂಮಿ ಕಲಾವಿದರು. ನನಗೆ ಆತನ ಪರಿಚಯ ಇರಲಲಿಲ್ಲ. ಆದರೆ ಅವನಿಗೆ ನನ್ನ ಪರಿಚಯ ಇತ್ತಂತೆ. ಈ ಹಿಂದೆ ನನಗೆ ಪ್ರಪೋಸಲ್ ಬಂದಿತ್ತು. ಆ ವೇಳೆ ನನಗೆ ಅನೇಕ ಮಂದಿ ಆತನ ಬಗ್ಗೆ ಮಾಹಿತಿ ನೀಡಿದ್ದು, ಹಲವು ಮಹಿಳೆಯರ ಜೊತೆ ಅವನಿಗೆ ಸಂಬಂಧ ಇತ್ತು ಎಂಬುದು ಗೊತ್ತಾಗಿತ್ತು. ಹೀಗಾಗಿ ಆ ಸಂಬಂಧ ಬಿಟ್ಟಿದ್ದೆ. ನಮ್ಮ ಮನೆಗೂ ಆತ ಬಂದು ಹೋಗುತ್ತಿದ್ದ. ನಂತರ ಮನೆಗೆ ಬರಬೇಡ ಎಂದಿದ್ದೆವು. ಆತನೇ ಸುದೀಪ್ ಮ ನೆಯವರ ತಲೆ ಕೆಡಿಸಿದ್ದು, ಈ ಬಗ್ಗೆ ಪತಿಯೇ ತನಗೆ ತಿಳಿಸಿದ್ದರು. ಸುದೀಪ್ ತಂದೆಗೆ ವೇಣುಗೋಪಾಲ್ ಕಡೆಯಿಂದ ಅನೇಕ ಬಾರಿ ಕರೆ ಹೋಗಿವೆ. ಹೀಗಾಗಿ ಆತ ಕೂಡ ತನ್ನ ಪತಿಯ ಆತ್ಮಹತ್ಯೆಗೆ ಕಾರಣ. ಹೀಗಾಗಿ ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದವರ ವಿರುದ್ಧ ದೂರು ನೀಡಿದ್ದೇನೆ. ಕಾರ್ಕಳ ಠಾಣೆಯಲ್ಲಿ ಸುದೀಪ್ ಮನೆಯವರು ಹಾಗೂ ವೇಣುಶೆಟ್ಟಿ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಸೌಮ್ಯಾ ತಿಳಿಸಿದ್ದಾರೆ.