ಬಂಟ್ವಾಳ,ಆ.09 (Daijiworld News/RD): ಕರಾವಳಿ ಜಿಲ್ಲೆಯಾದ್ಯಂತ ಮಳೆಯು ಬಿರುಸುಗೊಂಡಿದ್ದು, ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು, ಇದೀಗ ಪ್ರವಾಹ ಎದುರಾಗುವ ಭೀತಿ ಉಂಟಾಗಿರುವ ಕಾರಣ 80 ಕ್ಕೂ ಅಧಿಕ ಜನರನ್ನು ರಾತ್ರಿ ಸುಮಾರು 9.45 ಕ್ಕೆ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಜಿಲ್ಲಾಧಿಕಾರಿಗಳು ಈಗಾಗಲೇ ಬಂಟ್ವಾಳದ ಪಾಣೆಮಂಗಳೂರು ಶಾರದಾ ಪ್ರೌಢಶಾಲೆಯಲ್ಲಿ ಗಂಜಿ ಕೇಂದ್ರವನ್ನು ನಿರ್ಮಿಸಿದ್ದು, ನೆರೆಯ ಭೀತಿ ಎದುರಾಗುವ ಸಂಭವ ಇರುವ ಕಾರಣ ನೇತ್ರಾವತಿ ನದಿ ತೀರದಲ್ಲಿರುವ ಸುಣ್ಣದ ಗೂಡು ಪ್ರದೇಶದ ಸುಮಾರು 80 ಕ್ಕೂ ಅಧಿಕ ಜನರನ್ನು ರಾತ್ರಿ ಸುಮಾರು 9.45 ರ ವೇಳೆಗೆ ಸ್ಥಳಾಂತರಿಸಲಾಯಿತು.
ಇದರಲ್ಲಿ ಹೆಚ್ಚಿನವರು ಕಾರ್ಮಿಕ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮುಂಜಾಗ್ರತ ಕ್ರಮವಾಗಿ ಈ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ತಿಳಿಸಿದ್ದಾರೆ. ಪುರಸಭಾ ಅಧಿಕಾರಿಗಳು, ಕಂದಾಯಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗುರುವಾರವು ಹಗಲು ಹೊತ್ತು ಕೊಂಚ ಬಿಡುವುಗೊಂಡ ಮಳೆ ರಾತ್ರಿ ಎಡೆಬಿಡದೆ ನಿರಂತರವಾಗಿ ಸುರಿಯುತ್ತಿದ್ದು, ಇದೀಗ ಶುಕ್ರವಾರವು ಕೂಡ ಮಳೆಯ ಆರ್ಭಟ ಮುಂದುವರಿದೆ. ಇದರಿಂದಾಗಿ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣವು ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ.