ಉಳ್ಳಾಲ,ಆ.09 (Daijiworld News/RD): ಕಡಲ್ಕೊರೆತದ ತೀವ್ರತೆ ಉಚ್ಚಿಲ ಭಾಗದಲ್ಲಿ ಹೆಚ್ಚಿದೆ. 100 ಕ್ಕೂ ಹೆಚ್ಚು ಮೀ ವ್ಯಾಪ್ತಿಯಲ್ಲಿ ಕೊರೆತ ಉಂಟಾಗಿದೆ. ಕೂಡಲೇ ಸಂತ್ರಸ್ತ ಪೀಡಿತರಿಗೆ ನೆರವು ನೀಡುವಂತೆ ಮುಖ್ಯಮಂತ್ರಿಗಳ ಆದೇಶದಂತೆ ನೋಡೆಲ್ ಅಧಿಕಾರಿಯಾಗಿರುವ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಯಿಂದ ವರದಿ ಸಂಗ್ರಹಿಸಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಉಳ್ಳಾಲದ ಬಟ್ಟಂಪಾಡಿ, ಸೋಮೇಶ್ವರ, ಉಚ್ಚಿಲದ ಸಮುದ್ರ ಕೊರೆತಕ್ಕೆ ಒಳಗಾದ ಪ್ರದೇಶಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿದರು. ರಾಜ್ಯಾದ್ಯಂತ ನಾಯಕರಿಗೆ ಆಯಾಯ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಉಡುಪಿ, ಚಿಕ್ಕಮಗಳೂರು ಹಾಗೂ ಮಂಗಳೂರು ಮಳೆಹಾನಿ ಪ್ರದೇಶದ ಜವಾಬ್ದಾರಿಯನ್ನು ನೀಡಲಾಗಿದೆ. ಅದರಂತೆ ಸಂಸದ ನಳಿನ್ ಕಟೀಲ್ ಮತ್ತು ತಾನು ಉಡುಪಿ , ಬ್ರಹ್ಮಾವರ ಹಾಗೂ ಮಂಗಳೂರು ಭಾಗಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. ತುರ್ತು ಪರಿಹಾರವಾಗಿ ಕ್ರಮವನ್ನು ಕೈಗೊಳ್ಳಲಾಗಿದೆ. ಸುಳ್ಯದ ಕಲ್ಮಡ್ಕ ಮತ್ತು ಕಡಬ ಪ್ರದೇಶದಲ್ಲಿ ಸಂತ್ರಸ್ತರ ಶಿಬಿರ ಏರ್ಪಡಿಸಲಾಗಿದೆ. ಜಿಲ್ಲೆಯಾದ್ಯಂತ ವಿಪತ್ತು ದಳವನ್ನು ಸಜ್ಜಾಗಿ ನಿಲ್ಲಿಸಲು ಸೂಚಿಸಲಾಗಿದ್ದು, 2 ಎನ್ ಡಿಆರ್ ಎಫ್ ಪಡೆಯೂ ಕಾರ್ಯಾಚರಿಸುತ್ತಿದೆ. ತಹಶೀಲ್ದಾರರನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಿ, ಜಿಲ್ಲಾಧಿಕಾರಿಗಳ ಜತೆ ತೊಂದರೆಗೀಡಾದ ಪ್ರದೇಶಗಳ ಕುರಿತು ಚರ್ಚಿಸಲಾಗಿದೆ. ಸಂಧಿಗ್ಧ ಸ್ಥಿತಿಯಲ್ಲಿ ಸ್ಪಂಧಿಸುವಂತೆ ಇಲಾಖೆಗಳಿಗೆ ಸೂಚಿಸಲಾಗಿದೆ. ಬ್ರಹ್ಮಾವರ ಕಡೆ ಮಳೆಯಿಂದ ಸಾವು ಸಂಭವಿಸಿದೆ. ಮನೆಮಂದಿಗೆ ನಾಳೆಯೇ ಪರಿಹಾರ ಕೊಡುತ್ತೇವೆ ಎಂದರು.
ಸಂಸದ ನಳಿನ್ ಕಟೀಲ್ ಮಾತನಾಡಿ, ಸಂತ್ರಸ್ತರಿಗೆ ಗಂಜಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಲಾಗಿದೆ. ಮಂಗಳೂರಿನ ಎರಡು ಭಾಗಗಳಲ್ಲಿ ಅತಿವೃಷ್ಠಿ ಸಂಭವಿಸಿದೆ. ಉಚ್ಚಿಲದಲ್ಲಿ ಕಡಲ್ಕೊರೆತ, ಪಚ್ಚನಾಡಿಯಲ್ಲಿ ಮನೆ ಕುಸಿತಗಳು ಸಂಭವಿಸಿದೆ. ಸಂತ್ರಸ್ತರಿಗೆ ರಕ್ಷಣೆ ಕೊಡುವ ಕೆಲಸವಾಗಿದೆ. ಅಧಿಕಾರಿಗಳ ತಂಡ ಕ್ರಿಯಾಶೀಲವಾಗಿ ಇರುವಂತೆ ಆದೇಶಿಸಲಾಗಿದೆ. ಹಲವು ವರ್ಷಗಳ ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಕೇಂದ್ರ ಸರಕಾರ ಅನುದಾನ ಈಗಾಗಲೇ ನೀಡಿದೆ. ಆದರೆ ವೈಜ್ಞಾನಿಕವಾಗಿ ಕಾಮಗಾರಿ ನಡೆಯದೆ ಮತ್ತೆ ತೊಂದರೆಯಾಗಿದೆ. ರಾಜ್ಯ ಸರಕಾರದ ಸರಿಯಾದ ಸ್ಪಂಧನೆ ಸಿಗದೆ ಶಾಶ್ವತ ಪರಿಹಾರ ಸಮರ್ಪಕವಾಗಿ ಅನುಷ್ಠಾನವಾಗಿರಲಿಲ್ಲ. ಈ ಬಾರಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಯೋಜನೆಯನ್ನು ರೂಪಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರುಪ್ರಸಾದ್, ಕೋಟೆಕಾರು ಪಟ್ಟಣ ಪಂಚಾಯಿತಿ ಕಿರಿಯ ಅಭಿಯಂತರ ನಿತೇಶ್ ಹೊಸಗದ್ದೆ, ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯಕೆ. ರವೀಂದ್ರ ಶೆಟ್ಟಿ ಉಳಿದೊಟ್ಡು, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿಗಟ್ಟಿ ಸೋಮೇಶ್ವರ ಪುರಸಭೆಯ ಅಧ್ಯಕ್ಷ ರಾಜೇಶ್ ಉಚ್ಚಿಲ್, ಮುಖ್ಯಾಧಿಕಾರಿ ವಾಣಿ ವಿ. ಆಳ್ವ, ಕ್ಷೇತ್ರ ಉಪಾಧ್ಯಕ್ಷ ಪ್ರಕಾಶ್ ಸಿಂಪೋನಿ, ಚಂದ್ರಹಾಸ್ ಪಂಡಿತ್ ಹೌಸ್ ಹಾಗೂ ಪುರುಷೋತ್ತಮ ಕಲ್ಲಾಪು ಜೊತೆಗಿದ್ದರು.