ಕಾಸರಗೋಡು,ಆ.09 (Daijiworld News/RD): ಸತತವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಕಾಸರಗೋಡು ಜಿಲ್ಲೆ ತತ್ತರಗೊಂಡಿದ್ದು, ಗಾಳಿಯ ವೇಗಕ್ಕೆ ಬೃಹತ್ ಮರವೊಂದು ಕಾಸರಗೋಡು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರಿನ ಸಮೀಪದ ಮೊಗ್ರಾಲ್ ರಸ್ತೆಗೆ ಉರುಳಿ ಬಿದ್ದಿದೆ.
ಬ್ರಹತ್ ಮರ ಧರೆಗೆ ಉರುಳಿದ ಪರಿಣಾಮವಾಗಿ ಸಂಚಾರವು ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕರು ಪರದಾಡುವ ಸ್ಥಿತಿ ಕೆಲಕಾಲ ನಿರ್ಮಾಣವಾಯಿತು. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಆಗಸ್ಟ್ 9 ಮತ್ತು 10 ರಂದು ಕಾಸರಗೋಡು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಲವೆಡೆ ಪ್ರವಾಹ ಸ್ಥಿತಿ ಉಂಟಾಗಿದ್ದು, ನೀಲೇಶ್ವರದ ಅಚ್ಚಾತುರ್ತಿಯಲ್ಲಿ ಸೇತುವೆ ಕೊಚ್ಚಿ ಹೋದ ಘಟನೆ ಸಂಭವಿಸಿದೆ. ಜಿಲ್ಲೆ ಮಳೆ ಗಿಂತ ಗಾಳಿಯ ಅಬ್ಬರ ಹೆಚ್ಚಾಗಿರುವುದು ಹಲವೆಡೆ ಕೃಷಿ ನಾಶ ಉಂಟಾಗಿದೆ. ಉಪ್ಪಳ ತೀರದಲ್ಲಿ ಕಡಲ್ಕೊರೆತದ ಅಬ್ಬರ ಹೆಚ್ಚಾಗಿದ್ದು, ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಚೇರಂಗೈ ಸಿರಾಜ್ ನಗರದಲ್ಲಿ ಕಡಲ್ಕೊರೆತದಿಂದ ನಾಲ್ಕು ಕುಟುಂಬಗಳನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.