ಮಂಗಳೂರು, ಆ 09 (Daijiworld News/MSP): ಪ್ರತಿಕೂಲ ಹವಾಮಾನ ಹಾಗೂ ಸುರಿಯುತ್ತಿರುವ ಭಾರಿ ಮಳೆ ಹಿನ್ನಲೆ ಮಂಗಳೂರಿನಿಂದ ಹೊರಡುವ ವಿಮಾನಗಳ ಹಾರಾಟದಲ್ಲಿ ಗುರುವಾರ ವ್ಯತ್ಯಯ ಉಂಟಾಗಿದ್ದು ಅದು ಶುಕ್ರವಾರವೂ ಮುಂದುವರಿಯುವ ಸೂಚನೆ ಸಿಕ್ಕಿದೆ.
ಮಹಾಮಳೆ ಮುಂದುವರೆದಿದ್ದು ಅವಿಭಜಿತ ಜಿಲ್ಲೆಯಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿದೆ. ಶುಕ್ರವಾರವೂ ತೀವ್ರವಾದ ಗಾಳಿಯಿಂದ ಕೂಡಿದ ಭಾರೀ ಮಳೆ ಎಡೆಬಿಡದೆ ಸುರಿಯುತ್ತಿದೆ. ಈ ಹಿನ್ನಲೆಯಲ್ಲಿ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಕೆಲ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ಮಂಗಳೂರಿನಿಂದ ಹೊರಡುವ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಆರು ವಿಮಾನಗಳ ಸಂಚಾರ ಸಮಯದಲ್ಲಿ ತಾತ್ಕಲಿಕವಾಗಿ ಬದಲಾವಣೆ ಮಾಡಲಾಗಿದೆ. ಗುರುವಾರ ರಾತ್ರಿ 8.40ಕ್ಕೆ ಅಬುದಾಬಿಗೆ ಹೊರಡಬೇಕಿದ್ದ ವಿಮಾನ ಶುಕ್ರವಾರ ಬೆಳಗ್ಗೆ 6.15ಕ್ಕೆ, ಶುಕ್ರವಾರ ಬೆಳಗ್ಗೆ 6.35 ಕ್ಕೆ ಬಹರೈನ್ಗೆ ಹೊರಡಬೇಕಿದ್ದ ವಿಮಾನ ಬೆಳಗ್ಗೆ 9.35 ಕ್ಕೆ, ಶುಕ್ರವಾರ ಬೆಳಗ್ಗೆ 9.10 ಕ್ಕೆ ದುಬೈಗೆ ಹೊರಡಬೇಕಿದ್ದ ವಿಮಾನ ಮಧ್ಯಾಹ್ನ 3.15 ಕ್ಕೆ, ಸಂಜೆ 5.35 ಕ್ಕೆ ದೋಹಾಗೆ ತೆರಳಬೇಕಿದ್ದ ವಿಮಾನ ಸಂಜೆ 6.35 ಕ್ಕೆ, ರಾತ್ರಿ 8.05 ಕ್ಕೆ ದುಬೈಗೆ ತೆರಳಬೇಕಿದ್ದ ವಿಮಾನ 10.25 ಕ್ಕೆ, ಸಂಜೆ 7.25 ಕ್ಕೆ ದಮಾಮ್ಗೆ ಹೊರಡಬೇಕಿದ್ದ ವಿಮಾನ ರಾತ್ರಿ 12.20ಕ್ಕೆ ಹೊರಡಲಿದೆ ಎಂದು ತಿಳಿದುಬಂದಿದೆ.
ಇನ್ನು ಹವಾಮಾನ ವೈಪರೀತ್ಯ ಇದೇ ರೀತಿ ಮುಂದುವರಿದರೆ ನಾಳೆಯ ವಿಮಾನ ಹಾರಾಟ ಸೇವೆಯಲ್ಲೂ ವ್ಯತ್ಯಯವಾಗುವುದನ್ನು ತಳ್ಳಿಹಾಕುವಂತಿಲ್ಲ.