ಮಂಗಳೂರು, ಆ.09 (Daijiworld News/RD): ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಘಾಟ್ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ನೇತ್ರಾವತಿ ಹಾಗೂ ಕುಮಾರಧಾರ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇದೀಗ ನೇತ್ರಾವತಿ ಹಾಗೂ ಕುಮಾರಧಾರ ನದಿಗಳು ಸಂಗಮವಾಗಲಿದೆ.
ನೇತ್ರಾವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇದೀಗ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಬಳಿ ನೇತ್ರಾವತಿ ನದಿಯು ಶ್ರೀ ಮಹಾಕಾಳಿ ದೇವಾಲಯವನ್ನು ದಾಟಿ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗದ ಆವರಣದತ್ತ ಬಂದಿದ್ದು ದೇವಾಲಯದ ಇನ್ನೊಂದು ಬದಿಯಿಂದ ಕುಮಾರಧಾರ ನದಿಯ ನೀರು ಬಂದರೆ ಎರಡು ನದಿಗಳು ದೇವಾಲಯದ ಮುಂಭಾಗ ಸಂಗಮವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಚೆರ್ಲಾಡ್ಕದಲ್ಲಿ ಸತತ ಮೂರನೇ ಬಾರಿಗೆ ಸೇತುವೆ ಮುಳುಗಿದ್ದು ಜೊತೆಗೆ ಕಡಬಾದ ಹೊಸ್ಮತ್ನಲ್ಲಿರುವ ಹಳೆಯ ಸೇತುವೆ ಕೂಡ ಮುಳುಗಿದೆ. ಉಡುಪಿ ಜಿಲ್ಲೆಯಲ್ಲೂ ಮಳೆ ಇಂದೂ ಕೂಡ ಮುಂದುವರಿದಿದ್ದು, ಪಾಣೆಮಂಗಳೂರು ಬಳಿಯ ಅಲಡ್ಕಾದಲ್ಲಿ ಸುಮಾರು ಹತ್ತು ಮನೆಗಳು ಮುಳುಗಿದ್ದು ಮತ್ತು ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು.
ಈಗಾಗಲೇ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಲಿಪ್ಪಾಡಿ, ಮಾಜಿ ಸಚಿವ ಬಿ.ರಾಮನಾಥ್ ರೈ, ಜಿಲ್ಲಾಧಿಕಾರಿ, ಶಶಿಕಾಂತ್ ಸೆಂಥಿಲ್ ಮುಂತಾದವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದು, ಗುರುವಾರ, 26 ಮನೆಗಳಿಗೆ ಹಾನಿಯಾಗಿದೆ ಎಂಬ ವರದಿಗಳು ವರದಿಯಾಗಿವೆ. ಈಗಾಗಲೇ ಮಳೆ ಸಂಬಂಧಿತ ಘಟನೆಗಳಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿನ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಶುಕ್ರವಾರ ರಜಾದಿನವನ್ನು ಘೋಷಿಸಲಾಗಿದೆ.