ಕಾಸರಗೋಡು, ಆ 09 (Daijiworld News/MSP): ಕಾಸರಗೋಡು ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ತೀರವಾಸಿಗಳು ಹಾಗೂ ತಗ್ಗು ಪ್ರದೇಶದಲ್ಲಿ ವಾಸಿಸುವ ಸಾವಿರಾರು ಮಂದಿ ಅತಂತ್ರಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಹದಿನೆಂಟು ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ.
ಗುರುವಾರ ಮಧ್ಯಾಹ್ನ ತನಕ ಮಳೆಗೆ ಅಲ್ಪ ವಿರಾಮ ಲಭಿಸಿದ್ದರೂ ಸಂಜೆಯಾಗುತ್ತಲೇ ಆರಂಭಗೊಂಡ ಮಳೆ ಸತತವಾಗಿ ಸುರಿಯುತ್ತಿದ್ದು , ಜನಜೀವನ ಅಸ್ತವ್ಯಸ್ಥಗೊಂಡಿದೆ. ಬಹುತೇಕ ಕಡೆ ಕಳೆದ ಮೂರು ದಿನಗಳಿಂದ ವಿದ್ಯುತ್ ಸಂಪರ್ಕ ಅಸ್ತವ್ಯಸ್ಥಗೊಂಡಿದೆ . ಮಳೆ ಜೊತೆಗೆ ಭಾರೀ ಗಾಳಿ ಬೀಸುತ್ತಿರುವುದರಿಂದ ಕೋಟ್ಯಾ೦ತರ ರೂ. ಗಳ ನಾಶ ನಷ್ಟ ಉಂಟಾಗಿದೆ.
ಭಾರೀ ಮಳೆ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ . ಶಾಲಾ - ಕಾಲೇಜುಗಳಿಗೆ ಕಳೆದ ಎರಡು ದಿನಗಳಿಂದ ರಜೆ ನೀಡಲಾಗಿದೆ. ಕಾಸರಗೋಡು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂರಿನಲ್ಲಿ ಬ್ರಹತ್ ಮರ ಉರುಳಿ ಬಿದ್ದು , ಗಂಟೆಗಳ ಕಾಲ ವಾಹನ ಸಂಚಾರ ಅಸ್ಥವ್ಯಸ್ಥಗೊಂಡಿತು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಸ್ಥಳೀಯರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕೊಡೋ ಬೇಳೂರು, ಈಸ್ಟ್ ಎಳೇರಿ, ಬಳಾಲ್ ಮೊದಲಾದ ಗ್ರಾಮ ಪಂಚಾಯತ್ ವ್ಯಾಪ್ತಿಯ ತಗ್ಗು ಪ್ರದೇಶದ ಜನತೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಜಿಲ್ಲಾಧಿಕಾರಿ ಡಾ . ಡಿ ಸಜಿತ್ ಬಾಬು ಸೂಚನೆ ನೀಡಿದ್ದಾರೆ.
ನೀಲೇಶ್ವರ ಅಚ್ಚಾತುರ್ತಿಯಲ್ಲಿ ಹೊಳೆಯ ಸೇತುವೆ ಕೊಚ್ಚಿ ಹೋಗಿದ್ದು , ಪರಿಸರವಾಸಿಗಳು ಅತಂತ್ರಕ್ಕೆ ಸಿಲುಕಿದ್ದಾರೆ ಭಾರೀ ಗಾಳಿ ಮಳೆಯಿಂದ ಜಿಲ್ಲೆಯಾದ್ಯಂತ ವಿದ್ಯುತ್ ವ್ಯತ್ಯಯಗೊಂಡಿದೆ. ನೂರಾರು ಕಂಬಗಳು ಮುರಿದು ಬಿದ್ದಿದೆ. ಕಳೆದ ಎರಡು ದಿನಗಳ ಅವಧಿಯಲ್ಲಿ ಅತೀ ಹೆಚ್ಚು ನಾಶ ನಷ್ಟ ಉಂಟಾಗಿದೆ. ಜಿಲ್ಲೆಯ ಬಹುತೇಕ ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ತೇಜಸ್ವಿನಿ ನದಿ ತೀರದ ನೂರಕ್ಕೂ ಅಧಿಕ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ವೆಸ್ಟ್ ಎಳೇರಿ ಎಂಬಲ್ಲಿ ಬಾವಿಯೊಂದು ಕುಸಿದ ಘಟನೆ ನಡೆದಿದೆ.
ಉಪ್ಪಳ ತೀರದಲ್ಲಿ ಕಡಲ್ಕೊರೆತ ಅಬ್ಬರ ತೀವ್ರಗೊಂಡಿದೆ. ಮಣಿಮುಂಡ, ಮುಸೋಡಿ, ಶಾರದಾ ನಗರ , ಹನುಮಾನ್ ನಗರ ಮೊದಲಾದೆಡೆ ನೂರಾರು ಕುಟುಂಬದವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಕೆಲ ಕುಟುಂಬದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಹತ್ತಕ್ಕೂ ಅಧಿಕ ಮನೆಗಳು ಕಳೆದ ನಾಲ್ಕು ದಿನಗಳ ಅಂತರದಲ್ಲಿ ಕುಸಿದಿದೆ. ಉಪ್ಪಳ ಸರಕಾರಿ ಎಲ್ .ಪಿ ಶಾಲೆ, ಕ್ಲಾಯಿ ಕ್ಕೋಡು ಫಾಮ್ ಹೌಸ್, ಉಡು೦ಬುತ್ತಲ ಅಂಗನವಾಡಿ ಮೊದಲಾದೆಡೆ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ ಉಪ್ಪಳ ಮುಸೋಡಿ ತೀರದಲ್ಲಿನ ಒಂಭತ್ತು ಕುಟುಂಬಗಳನ್ನು ಉಪ್ಪಳ ಶಾಲೆಗೆ ಸ್ಥಳಾಂತರಿಸಲಾಗಿದೆ. ಕುಂಬಳೆಯಲ್ಲಿ ಎರಡು ಕುಟುಂಬಗಳನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಯಾವುದೇ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಎಲ್ಲಾ ಇಲಾಖೆಗಳು ಈ ನಿಟ್ಟಿನಲ್ಲಿ ಗಮನ ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ಡಾ . ಡಿ . ಸಜಿತ್ ಬಾಬು ತಿಳಿಸಿದ್ದಾರೆ.