ಬೆಳ್ತಂಗಡಿ, ಆ 09 (Daijiworld News/SM): ತಾಲೂಕಿನಾದ್ಯಂತ ನಿರಂತರವಾಗಿ ಸುರಿದ ಮಳೆಯಿಂದಾಗಿ ನಿರೀಕ್ಷಿಸದ ರೀತಿಯಲ್ಲಿ ಪ್ರವಾಹ ಉಂಟಾಗಿ ಕೋಟ್ಯಾಂತರ ನಷ್ಟವುಂಟಾಗಿದೆ. ಯಾವುದೇ ಸಾವು ಸಂಭವಿಸಿಲ್ಲವಾದರೂ ಸಾವಿರಾರು ಎಕರೆ ಕೃಷಿ ಪ್ರದೇಶ ಮುಳುಗಡೆಯಾಗಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿ ಶುಕ್ರವಾರ ಬೆಳಗ್ಗಿನಿಂದಲೇ ತಾಲೂಕಿನಲ್ಲಿ ಹರಿಯುತ್ತಿರುವ ನೇತ್ರಾವತಿ ನದಿ ಸೇರಿದಂತೆ ಇತರ ಎಲ್ಲಾ ಉಪನದಿಗಳಲ್ಲಿ ವ್ಯಾಪಕವಾದ ಪ್ರವಾಹದ ನೀರು ಹರಿದು ಬಂದ ಹಿನ್ನೆಲೆಯಲ್ಲಿ ನದಿಪಾತ್ರದ ಪ್ರದೇಶಗಳು ಜಲಾವೃತಗೊಂಡು ನೂರಾರು ಮನೆಗಳಿಗೂ ನೀರು ನುಗ್ಗಿದ ಘಟನೆ ನಡೆದಿದೆ.
ತಾಲೂಕಿನಾದ್ಯಂತ ಶುಕ್ರವಾರ ಅವ್ಯಾಹತವಾಗಿ, ಎಡೆಬಿಡದೆ, ಧಾರಾಕಾರ ಸುರಿದ ಆಶ್ಲೇಷ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ. ನೂರಾರು ಕುಟುಂಬಗಳ ಸ್ಥಳಾಂತರ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹಲವೆಡೆ ಸೇತುವೆಗಳು ಕುಸಿದು ಸಂಪರ್ಕ ಕಡಿತಗೊಂಡಿದೆ.
ತಾಲೂಕಿನ ನೇತ್ರಾವತಿ ನದಿ, ಫಲ್ಗುಣಿ ನದಿ, ಮೃತ್ಯುಂಜಯ, ಸೋಮಾವತಿ, ನೆರಿಯ ಹೊಳೆ, ಅಣಿಯೂರು ಹೊಳೆ ಹೀಗೆ ಎಲ್ಲಾ ನದಿಗಳಲ್ಲೂ ನಿರೀಕ್ಷಿಸದ ರೀತಿಯಲ್ಲಿ ಪ್ರವಾಹದ ನೀರು ಬಂದು ಆತಂಕ ಸೃಷ್ಟಿಯಾಗಿದೆ. ತಾಲೂಕಿನ ಪುದುವೆಟ್ಟು, ಚಾರ್ಮಾಡಿ, ದಿಡುಪೆ, ಮಿತ್ತಬಾಗಿಲು, ಕೊಲ್ಲಿ, ನೆರಿಯ, ಮಲವಂತಿಗೆ ಹೀಗೆ ಬಹುತೇಕ ಗ್ರಾಮಗಳಲ್ಲಿ ಮನೆಗಳ ಜತೆ ಸಾವಿರಾರು ಎಕರೆ ಕೃಷಿ ಭೂಮಿಯೂ ಜಲಾವೃತಗೊಂಡಿದೆ.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟವು ಬೆಳಗ್ಗೆಯೇ ಮುಳುಗಡೆಯಾಗಿದ್ದು, ಮಧ್ಯಾಹ್ನದಲ್ಲಿ ಹೆಚ್ಚಿನ ನೀರು ಹರಿದು ಸಂಪೂರ್ಣ ಜಲಾವೃತಗೊಂಡಿತ್ತು. ತಾಲೂಕಿನ ಬಹುತೇಕ ಸೇತುವೆಗಳು ಕೂಡ ಮುಳುಗಡೆಯಾಗಿ ಸಂಪರ್ಕವೂ ಕಡಿತಗೊಂಡಿದೆ. ಕಳೆದ ಕೆಲವು ದಿನಗಳಿಂದ ವಿದ್ಯುತ್ ಜನರು ಕಂಗೆಟ್ಟಿದ್ದಾರೆ.
ಮಿತ್ತಬಾಗಿಲು ಗ್ರಾಮದ ದಿಡುಪೆ ಪ್ರದೇಶದಲ್ಲಿ ಸ್ಥಳೀಯ ಹೊಳೆಯಿಂದ ಪ್ರವಾಹದ ನೀರು ಉಕ್ಕಿ ಕೂಡಬೆಟ್ಟು ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ನುಗ್ಗಿದ್ದು, ವರಮಹಾಲಕ್ಷ್ಮೀ ಪೂಜೆಗೆ ಬಂದವರು ಸಿಲುಕಿ ಹಾಕಿಕೊಂಡ ಘಟನೆ ನಡೆದಿತ್ತು. ಸುಮಾರು ನೂರಕ್ಕೂ ಅಧಿಕ ಭಕ್ತರು ಪೂಜೆಗೆ ಆಗಮಿಸಿದ್ದು, ಕೊಂಚಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜತೆಗೆ ಈ ಭಾಗದಲ್ಲಿ ಎರಡು ಮನೆಗಳು ಮುಳುಗಡೆಯಾದ ಘಟನೆ ನಡೆದಿತ್ತು.
ಕಡಿರುದ್ಯಾವರ ಮಠ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನಕ್ಕೂ ನೀರು ನುಗ್ಗಿದೆ. ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಹಿಂಬದಿಯ ಧರೆ ಕುಸಿದು ಅರ್ಚಕರ ಮನೆ ಹಾಗೂ ದೇವಸ್ಥಾನ ಅಪಾಯದ ಸ್ಥಿತಿಗೆ ತಲುಪಿದೆ.
ನೆರಿಯ ಗ್ರಾಮದ ಕಾಟಾಜೆ ಪ್ರದೇಶದಲ್ಲಿ ದನವೊಂದನ್ನು ಮೇಯಲು ಕಟ್ಟಲು ಬಯಲು ಪ್ರದೇಶಕ್ಕೆ ತೆರಳಿದ್ದ ವೃದ್ಧ ಡೀಕಯ್ಯ ಗೌಡ ಅವರು ಪ್ರವಾಹದ ನೀರಿನಲ್ಲಿ ಸಿಲುಕಿ ಹಾಕಿಕೊಂಡ ಘಟನೆ ನಡೆದಿದೆ. ಅವರು ದನವನ್ನು ಕಟ್ಟಲು ತೆರಳುವ ಸಂದರ್ಭ ಪ್ರವಾಹ ಕಡಿಮೆಯಿದ್ದು, ಬಳಿಕ ಏಕಾಏಕಿ ನೀರು ಬಂದು ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಅವರ ಪುತ್ರ ತೆರಳಿ ರಕ್ಷಣೆ ಮಾಡಿದ್ದಾರೆ.