ಮಂಗಳೂರು, ಆ 09 (Daijiworld News/SM): ಮಹಿಳೆಯ ಜತೆ ಅನೈತಿಕ ಸಂಬಂಧ ಬೆಳೆಸಿ ಅತ್ಯಾಚಾರ ಮಾಡಿ ಕೊಲೆಗೈದ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ಎರಡು ಲಕ್ಷ ರೂ. ದಂಡ ವಿಧಿಸಿ 6ನೇ ಹೆಚ್ಚುವರಿ ಜಿಲ್ಲಾ ಮತ್ತ ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ನಿವಾಸಿ ಲಕ್ಷ್ಮಣ ಆಚಾರ್ಯ(31) ಶಿಕ್ಷೆಗೊಳಗಾದ ಅರೋಪಿ.
ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸೈಯಿದುನ್ನೀಸಾ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ಎರಡು ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡ ವಿಧಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಸಾದಾ ಶಿಕ್ಷೆ ಅನುಭವಿಸಬೇಕು. ದಂಡದ ಮೊತ್ತದಲ್ಲಿ ಮಹಿಳೆಯ ಪುತ್ರನಿಗೆ 1.5ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣ ವಿವರ:
ಮರೋಡಿ ಗ್ರಾಮದ ಮಹಿಳೆಯೊಬ್ಬರು ಮದುವೆಯಾಗಿ ಪತಿಯನ್ನು ತ್ಯಜಿಸಿದ್ದರು. ಅವರಿಗೆ ಒಂಬತ್ತು ವರ್ಷದ ಮಗನಿದ್ದು, 3ನೇ ತರಗತಿಯಲ್ಲಿ ಓದುತ್ತಿದ್ದ. ಅದೇ ಗ್ರಾಮದ ಲಕ್ಷ್ಮಣ ಆಚಾರ್ಯ ಮಹಿಳೆಯ ಜತೆ ಅನೈತಿಕ ಸಂಬಂಧ ಹೊಂದಿದ್ದ. ಅಲ್ಲದೆ ಪದೇಪದೇ ಮಹಿಳೆಯನ್ನು ಭೇಟಿಯಾಗುತ್ತಿದ್ದ. ಒಂದು ದಿನ ಮಹಿಳೆ ಯುವಕನ ಬಳಿ ಮದುವೆಯಾಗಲು ಒತ್ತಾಯಿಸುತ್ತಾಳೆ.
ಇದರಿಂದ ಅಸಮಾಧಾನಗೊಂಡ ಯುವಕ ಆಕೆಯನ್ನು ಪುಸಲಾಯಿಸಿ 2012ರ ಆ.16ರಂದು ಮಧ್ಯಾಹ್ನ 2:30ಕ್ಕೆ ಮರೋಡಿ ಗ್ರಾಮದ ದೇರಾಜೆಗುಡ್ಡಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆಗೈದು ಪರಾರಿಯಾಗಿದ್ದ.
ಸಂಜೆ ಶಾಲೆಯಿಂದ ಬಂದ ಮಹಿಳೆಯ ಪುತ್ರ, ತನ್ನ ತಾಯಿಯು ಮನೆಯಲ್ಲಿ ಕಾಣದಿದ್ದಾಗ ಮಾವನ ಬಳಿ ವಿಷಯ ತಿಳಿಸುತ್ತಾನೆ. ಕೂಡಲೇ ಸಂಬಂಧಿಕರು, ಊರವರು ಮಹಿಳೆಗಾಗಿ ಹುಡುಕಾಟ ನಡೆಸುತ್ತಾರೆ.