ಮಂಗಳೂರು, ಡಿ 20 : ಒಖಿ ಬಳಿಕ ಇದೀಗ ಕರಾವಳಿ ಪ್ರದೇಶದಲ್ಲಿ ತೀವ್ರತೆರನಾದ ಗಾಳಿ ಬೀಸಲಿದೆ ಎಂದು ಸಮುದ್ರದ ತೀರ ಪ್ರದೇಶದ ಜನರಿಗೆ ಹವಮಾನ ಇಲಾಖೆ ಮುನ್ನೆಚರಿಕೆ ನೀಡಿದೆ. ಗಂಟೆಗೆ ಸುಮಾರು 45 ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು ಸಮುದ್ರಕ್ಕೆ ಇಳಿಯುವ ಬೆಸ್ತರು ಎಚ್ಚರ ವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ. ಗಾಳಿಯ ಪರಿಣಾಮ ಸಮುದ್ರದಲ್ಲಿ ಬೃಹತ್ ಗಾತ್ರದ ಅಲೆಗಳು ಏಳುವ ಸಾಧ್ಯತೆ ಇದೆ. ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ನಿಮ್ನ ಒತ್ತಡ ಸೃಷ್ಟಿಯಾಗುವ ಸಂಭವ ಇದೆ. ಈಗ ಮೇಲ್ಮೈ ಸುಳಿಗಾಳಿ ಬೀಸುತ್ತಿದ್ದ್ದು ಅದು ಡಿ. 25 ರ ವೇಳೆಗೆ ನಿಮ್ಮ ಒತ್ತಡವಾಗಿ ಮಾರ್ಪಾಡಾಗುವ ನಿರೀಕ್ಷೆ ಹೊಂದಲಾಗಿದೆ. ಉತ್ತರ ಕೇರಳದ ಸಮುದ್ರದಲ್ಲಿಯೂ ಮೇಲ್ಮೈಸುಳಿಗಾಳಿ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ದಕ್ಷಿಣ ಕನ್ನಡ , ಉಡುಪಿ, ಕಾಸರಗೋಡು ಮುಂತಾದ ಪ್ರದೇಶಗಳ ತೀರ ಪ್ರದೇಶದ ಜನರು ಎಚ್ಚರಿಕೆಯಿಂದ ಇರಬೇಕೆಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.