ಮಂಗಳೂರು, ಆ 10 (Daijiworld News/MSP): ಒಂದೆಡೆ ಬೋರ್ಗರೆಯುವ ಮಳೆ, ಇನ್ನೊಂದೆಡೆ ದಕ್ಷಿಣ ಕನ್ನಡದ ಜೀವನದಿಗಳಾದ, ನೇತ್ರಾವತಿ, ಕುಮಾರಧಾರೆ, ಸೇರಿ ಜಿಲ್ಲೆಯಲ್ಲಿ ಹರಿಯುವ ಎಲ್ಲಾ ನದಿಗಳು ರೌದ್ರರೂಪ ತಾಳಿ ಹರಿಯುತ್ತಿದೆ. ನೂರಾರು ಮಂದಿ ನದಿ ಪ್ರವಾಹದಲ್ಲಿ ಸಿಲುಕಿದ್ದು, ಮನೆ ಮಠ ಕಳೆದುಕೊಂಡು ಕಣ್ಣೀರು ಸುರಿಸುತ್ತಿದ್ದಾರೆ.
ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜನವಾಸ ಪ್ರದೇಶಗಳಿಗೆ ನೀರು ನುಗ್ಗಿದ್ದು ನದಿ ತಟದಲ್ಲಿರುವ ಬಹುತೇಕ ಮನೆಗಳು ಮುಳುಗಡೆಯಾಗಿದೆ. ಬಿ.ಸಿ ರೋಡ್ ನ ಬಂಟರ ಭವನ, ಬ್ರಹ್ಮರಕೋಟ್ಲು ದೇವಸ್ಥಾನ , ಬಿಸಿ ರೋಡ್ ಸರ್ವಿಸ್ ರಸ್ತೆ, , ಮಾಣಿ , ಪಾಣೇರು, ಪಡೀಲ್ , ಜಪ್ಪಿನ ಮೊಗೇರು, ಉಳ್ಳಾಲ, ಮಂಗಳೂರು ಬಂದರು, ಕಡೆಕಾರು, ಜಕ್ರೀಬೆಟ್ಟು ಮೊದಲಾದ ಪ್ರದೇಶ ಸಂಪೂರ್ಣ ಜಲಾವೃತ್ತಗೊಂಡಿದೆ.
ಬಂಟ್ವಾಳ ಕ್ರಾಸ್ ನಲ್ಲಿರುವ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ನಿವಾಸಕ್ಕೂ ಪ್ರವಾಹದ ನೀರು ಆವರಿದಿದ್ದು, ರಕ್ಷಣಾ ಸಿಬ್ಬಂದಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಅವರ ತೋಟವೂ ಸಂಪೂರ್ಣ ಜಲಾವೃತಗೊಂಡಿದೆ.
ಉಳ್ಳಾಲ ಒಳಜೆಪ್ಪಿನಮೊಗರು ಜಲಾವೃತಗೊಂಡಿದ್ದು ಅಲ್ಲಿನ ನಿವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿ ಸುಮಾರು 50-60 ಮನೆಗಳಿಗೆ ನೆರೆ ನೀರು ನುಗ್ಗಿದ್ದು, ಸ್ಥಳೀಯವಾಗಿ ಲಭ್ಯವಿರುವ ತೆಪ್ಪ ಹಾಗೂ ದೋಣಿಯನ್ನು ಬಳಸಿ ಸ್ಥಳೀಯ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವಲ್ಲಿ ಸ್ವಯಂ ಸೇವಾ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿದ್ದಾರೆ. ಕಾರ್ಯಚರಣೆಗೆ ಮತ್ತಷ್ಟು ಕಾರ್ಯಕರ್ತರು ಆಗಮಿಸಿ ಕೈ ಜೋಡಿಸುವಂತೆ ಕಾರ್ಯಚರಣೆಯಲ್ಲಿ ನಿರತರಾದವರು ವಿನಂತಿಸಿಕೊಂಡಿದ್ದಾರೆ.
ಸಂಪರ್ಕಿಸಬೇಕಾದ ಸಂಖ್ಯೆ - : ತಿಲಕ್ ಶಿಶಿಲ
+919035779185