ಮಂಗಳೂರು,ಆ.11(Daijiworld News/RD): ದೇಶದಲ್ಲಿ ಯುವಜನಾಂಗ ಅಧಿಕವಾಗಿದ್ದು, ಯುವ ಮತದಾರಾರೇ ಹೆಚ್ಚಾಗಿರುವುದನ್ನು ಗಮನಿಸಬಹುದು. ಆದುದರಿಂದ ಯುವಜನರು ಮತ ಚಲಾಯಿಸಿದ ಬಳಿಕ ವ್ಯಕ್ತಿಯನ್ನು ವೈಭವೀಕರಿಸುವ ಬದಲು ಪ್ರಶ್ನಿಸುವ ಮನೋಭಾವವನ್ನು ತಮ್ಮಲ್ಲಿ ಬೆಳೆಸಿಕೊಳ್ಳಬೇಕು, ಆಗ ಪ್ರಜಾಪ್ರಭುತ್ವದ ನಿಜವಾದ ಮೌಲ್ಯಗಳನ್ನು ಅರಿಯಲು ಸಾಧ್ಯ ಎಂದು ಎಂದು ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟದ ಮುಖಂಡ ಡಾ.ಕನ್ಹಯ್ಯ ಕುಮಾರ್ ಹೇಳಿದರು.
ಅವರು ನಗರದ ಸಹೋದಯ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ಶನಿವಾರ ನಡೆದ ದಿ|ಬಿ.ವಿ.ಕಕ್ಕಿಲಾಯ ಅವರ ಜನ್ಮಶತಾಬ್ದ ಪ್ರಯುಕ್ತ ನಡೆದ ವಿಚಾರ ಸಂಕೀರಣದಲ್ಲಿ ’ ಕವಲು ದಾರಿಯಲ್ಲಿ ಭಾರತದ ಯುವಕರು’ ಎಂಬ ವಿಷಯದ ಕುರಿತು ಮಾತನಾಡಿದರು.
ದೇಶಭಕ್ತಿ ಹೆಸರಿನಲ್ಲಿ ಸರಕಾರವು ಜನರ ಅಭಿಪ್ರಾಯಗಳ ಮೇಲೆ ಮಸಿ ಬಳಿಯುತ್ತಿದೆ, ಅಂಧ ಭಕ್ತಿಯನ್ನು ಮೂಡಿಸುತ್ತಿದೆ. ಈ ಅಂಧ ಭಕ್ತಿಯೂ ಕೂಡ ದೇಹದ್ರೋಹ ಕೃತ್ಯ. ಧರ್ಮದ ಹೆಸರಿನಲ್ಲಿ ಜಾತ್ಯಾತೀತತೆಯನ್ನು ಬಿತ್ತರಿಸುವ ತಂತ್ರವನ್ನು ಹೂಡುತ್ತಿದೆ ಎಂದರು. ಪ್ರಜಾಪ್ರಭುತ್ವದ ಪಾಠ ಮನೆಯಿಂದಲೇ ಆರಂಭವಾಗ ಬೇಕೇ ಹೊರತು ಇನ್ನೊಬ್ಬರ ಭಾಷಣ ಆಲಿಸಿ ಅಲ್ಲ. ಯುವ ಜನಾಂಗವು ಇಂದು ಪ್ರಶ್ನಿಸುವ ಮನೋಭಾವ ಬೆಳೆಸಬೇಕು ಆಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯವನ್ನು ಅರಿಯಲು ಸಾಧ್ಯ.
ಡಾ.ಕಕ್ಕಿಲಾಯ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರಿಂದ ದೇಶದ್ರೋಹಿ ಎಂದು ಕರೆಸಿಕೊಂಡರು. ಅದೇ ರೀತಿ ಇಂದು ತಮ್ಮ ಹಕ್ಕು, ಬೇಡಿಕೆಗಳಿಗೆ ಹೋರಾಟ ಮಾಡುವವರನ್ನು ಪೊಲೀಸರು ಬಂಧಿಸಿ ದೇಶದ್ರೋಹಿ ಪಟ್ಟ ಕಟ್ಟುತ್ತಿದ್ದಾರೆ. ಹೀಗಾಗಿ 100 ವರ್ಷಗಳಲ್ಲಿ ಆಗಿರುವ ಬದಲಾವಣೆ ಇಷ್ಟೇ. ಇಂದು ಅರ್ಥ ಶಾಸ್ತ್ರಕ್ಕೆ ಧರ್ಮಶಾಸ್ತ್ರದ ವಿಚಾರವನ್ನು ಹೊರೆಸಲಾಗಿದೆ. ದೇಶದ ಆರ್ಥಿಕ ಸ್ಥಿತಿಯು ಸಂಪೂರ್ಣ ಹದಗೆಟ್ಟಿದ್ದು, ಇದನ್ನು ಹೇಗೆ ಉತ್ತಮಗೊಳಿಸುವುದು ಮತ್ತು ಪರಿಹಾರ ಯಾವ ರೀತಿಯಲ್ಲಿ ಕಂಡುಕೊಳ್ಳುವುದು ಎಂಬುವುದು ಪ್ರಧಾನಿಯ ಮುಖ್ಯ ಕರ್ತವ್ಯವಾಗಿರುತ್ತದೆ. ಆದರೆ ಇಂದಿನ ಪ್ರಧಾನಿಯವರು ಆರ್ಥಿಕ ಪರಿಸ್ಥಿತಿಯ ಕುರಿತು ಚಿಂತನೆ ಮಾಡದೆ ದೇಶವನ್ನು ಧರ್ಮದ ಹೆಸರಿನಲ್ಲಿ ಆಳುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಆಡಳಿತ ರೂಪಿಸಿಕೊಳಳುವುದು ಅದು ಎಂದಿಗೂ ಶಾಶ್ವತವಲ್ಲ, ಕ್ಷಣಿಕ ಮಾತ್ರ ಎಂದರು.
ಪೋಷಕರು ಮಕ್ಕಳಿಗೆ ಬಾಲ್ಯದಲ್ಲಿಯೇ ರಾಜಕೀಯ ಮತ್ತು ರಾಜಕಾರಣಿಗಳ ಬಗ್ಗೆ ತಪ್ಪು ತಿಳಿವಳಿಕೆ ನೀಡಿ, ರಾಜಕೀಯದ ಮೇಲೆ ನಿರಾಸಕ್ತಿಯ ಭವನೆಯನ್ನು ಬೆಳೆಸುತ್ತಾರೆ. ಆ ರೀತಿ ಮಾಡುವುದು ಸರಿಯಲ್ಲ, ಮಕ್ಕಳಿಗೆ ಪ್ರಶ್ನಿಸುವ ಮನೋಭಾವನ್ನು ಬೆಳೆಸಬೇಕು ಪ್ರತಿಯೊಂದು ವಿಷಯದ ಕುರಿತು ಪ್ರಶ್ನಿಸಿ, ಚರ್ಚಿಸಿ, ಆಳವಾದ ಜ್ಞಾನವನ್ನು ಪಡೆಯುವುದು ಅಗತ್ಯ. ಆದರೆ ಇಂದು ನಮ್ಮ ಯುವಜನಾಂಗದಲ್ಲಿ ಪ್ರಶ್ನಿಸುವ ಮನೋಭಾವ ಇಲ್ಲದೇ ಇರುವುದು ವಾಸ್ತವದ ಸಂಗತಿ. ಎಂದು ಹೇಳಿದರು. ಡಾ. ಕಾರ್ಯಕ್ರಮದಲ್ಲಿ ವೆಂಕಟಕೃಷ್ಣ ಉಪಸ್ಥಿತರಿದ್ದರು, ಡಾ.ಶ್ರೀನಿವಾಸ ಕಕ್ಕಿಲ್ಲಾಯ ಕಾರ್ಯಕ್ರಮವನ್ನು ನಿರ್ವಹಿಸಿದರು.