ಪುತ್ತೂರು,ಆ.11(Daijiworld News/RD): ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಮಣ್ಣು ಕೂಡ ಸವೆದು ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಬಳಿಯ ಉರುವಾಲು ಗ್ರಾಮದ ಮುರಿಯಾಲಾದಲ್ಲಿ ಹಳೆಯ ಬಾವಿಯ ಮಣ್ಣು ಪೂರ್ತಿ ಕುಸಿದ ಕಾರಣ ವ್ಯಕ್ತಿಯೊಬ್ಬರು ಅಪಾಯದಲ್ಲಿ ಸಿಲುಕಿಕೊಂಡರು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ವ್ಯಕ್ತಿಯನ್ನು ಪ್ರಾಣಾಪಾಯದಿಂದ ರಕ್ಷಿಸಿದರು.
ವಿಪರೀತ ಮಳೆಯಾದ ಕಾರಣ ಮಳೆಯಿಂದ ಉಂಟಾದ ಹಾನಿಯನ್ನು ನೋಡಲು ಮೊಹಮ್ಮದ್ ಇಕ್ಬಾಲ್ (52) ಹೋದಾಗ ಈ ಘಟನೆ ಸಂಭವಿಸಿದೆ. ಮಳೆಯಿಂದಾಗಿ ಬಾವಿಯು ಸಂಪೂರ್ಣ ಮಣ್ಣಿನಿಂದ ಆವೃತವಾಗಿದೆ. ಆ ಪ್ರದೇಶದಲ್ಲಿ ಮೊದಲು ಬಾವಿ ಇದ್ದು ಮಣ್ಣು ಜರಿದು ಬಾವಿ ಸಂಪೂರ್ಣ ಮುಚ್ಚಲ್ಪಟ್ಟಿದ್ದು, ಭೂಮಿ ಕುಸಿದು, ಕೆಸರು ಮತ್ತು ಕೆಸರಿನ ರಾಶಿಯು ಬಾವಿಯನ್ನು ಆವರಿಸಿದ್ದು, ಇದನ್ನು ಗಮನಿಸದ ಮೊಹಮ್ಮದ್ ಇಕ್ಬಾಲ್ ಆ ಜಾಗಕ್ಕೆ ಕಾಲಿಟ್ಟಾಗ ಆಯತಪ್ಪಿ ಬಿದ್ದರು. ತಕ್ಷಣ ಕೂಗಿದ ಮೊಹಮ್ಮದ್, ಕೂಡಲೇ ಅವರ ಸಹಾಯಕ್ಕಾಗಿ ಸ್ಥಳೀಯ ನಿವಾಸಿ ರಾಮಚಂದ್ರ ಗೌಡ ಮುರಿಯಾಲಾ ಸ್ಥಳಕ್ಕೆ ಧಾವಿಸಿ ಮೇಲಕ್ಕೆತ್ತಿ ರಕ್ಷಿಸಲು ಮುಂದಾದರು.
ಪುತ್ತೂರು ತಾಲೂಕಿನಾದ್ಯಂತ ಸ್ಥಳೀಯ ಸ್ವಯಂಸೇವಕರು ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಹೆಗಲು ಕೊಟ್ಟು ಸ್ಪಂದಿಸುತ್ತಿದ್ದು, ಈಗಾಗಲೇ ಸ್ವಯಂ ಸೇವಕರ ತಂಡವನ್ನು ರಚಿಸಿ ರಕ್ಷಣಾ ಕಾರ್ಯವನ್ನು ಮಾಡುತ್ತಿದ್ದಾರೆ. ಯುವಕರ ಈ ಗುಂಪುಗಳು ಜಿಲ್ಲಾಡಳಿತಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಅನೇಕ ಸ್ವಯಂಸೇವಕರು ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.