ಮಂಗಳೂರು, ಆ 11 (DaijiworldNews/SM): ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಲ್ಲಿ ನೀರು, ನೊಣಗಳಿಂದ, ಸೊಳ್ಳೆ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದ್ದು, ಸಾರ್ವಜನಿಕರು ಹೆಚ್ಚಿನ ಮುಂಜಾಗರೂಕತೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಎಚ್ಚರಿಕೆ ನೀಡಿದ್ದಾರೆ.
ನದಿ, ತೊರೆಗಳಲ್ಲಿ ಹರಿಯುವ ಕಲುಷಿತ ಪ್ರವಾಹದ ನೀರು ಕೆರೆ ಹಾಗೂ ಬಾವಿಗಳಿಗೆ ಸೇರಿರುವುದರಿಂದ ಪ್ರಮುಖವಾಗಿ ವಾಂತಿಬೇಧಿ, ವಿಷಮಶೀತ ಜ್ವರ, ಇಲಿಜ್ವರ, ಜಾಂಡಿಸ್ ರೋಗಗಳು ಹರಡುವ ಸಾಧ್ಯತೆಯಿದೆ. ಸಾರ್ವಜನಿಕರು ತಮ್ಮ ಬಾವಿಗಳ ನೀರನ್ನು ಆರೋಗ್ಯ ಕಾರ್ಯಕರ್ತರ ಮೂಲಕ ಪರೀಕ್ಷಿಸಿ ಕುಡಿಯಲು ಯೋಗ್ಯವೇ ಎಂದು ತಿಳಿದುಕೊಳ್ಳಬೇಕು. ಜಿಲ್ಲೆಯ ಎಲ್ಲಾ ಪುನರ್ವಸತಿ ಕೇಂದ್ರಗಳಲ್ಲಿ ವೈದ್ಯರು, ಆರೋಗ್ಯಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ಅಂಗಡಿಗಳಲ್ಲಿ ಕತ್ತರಿಸಿ ಮಾರಾಟ ಮಾಡುವ ಹಣ್ಣ ಹಂಪಲುಗಳನ್ನು ಖರೀದಿಸಬಾರದು. ತರಕಾರಿ ಹಣ್ಣುಗಳನ್ನು ಬಿಸಿ ನೀರಿನಿಂದ ತೊಳೆದು ತಿನ್ನಬೇಕು. ಸಾಧ್ಯವಾದಷ್ಟು ಬಿಸಿ ಆಹಾವರನ್ನೇ ಸೇವಿಸಬೇಕೆಂದರು.
ಜಿಲ್ಲೆಯ ಎಲ್ಲ ಹೋಟೆಲ್ ಗಳಲ್ಲಿ ಗ್ರಾಹಕರಿಗೆ ಕಡ್ಡಾಯವಾಗಿ ಕುದಿಸಿ ಆರಿಸಿದ ಬಿಸಿ ನೀರನ್ನೇ ನೀಡಬೇಕು. ಆಹಾರ ಪದಾರ್ಥಗಳನ್ನು ತಯಾರಿಸುವವರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಾಲೀಕರು ಈ ಕುರಿತು ಗಮನ ಹರಿಸಬೇಕು ಎಂದು ಆರೋಗ್ಯಾಧಿಕಾರಿ ಸೂಚಿಸಿದ್ದಾರೆ.
ಈ ವೇಳೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್ ಕುಮಾರ್, ಆರ್ಸಿಎಚ್ ಅಧಿಕಾರಿ ಡಾ. ರಾಜೇಶ್ ಬಿ.ವಿ. ಉಪಸ್ಥಿತರಿದ್ದರು.