ಕೊಚ್ಚಿ ಹೋಗಿದೆ ಚಾರ್ಮಾಡಿ ಘಾಟ್ ರಸ್ತೆ - 3 ತಿಂಗಳು ಸಂಚಾರ ನಿಷೇಧದ ಭೀತಿ
Mon, Aug 12 2019 08:50:21 AM
ಬೆಳ್ತಂಗಡಿ, ಆ.12(Daijiworld News/SS): ರಾಜ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಘಾಟಿ ಪ್ರದೇಶದಲ್ಲಿ ಭೂ ಕುಸಿತ ಉಂಟಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಾರ್ಮಾಡಿ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರು ಮುಂತಾದ ಕಡೆ ಹೋಗಲು ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಚಾರ್ಮಾಡಿ ಘಾಟ್ ಬಂದ್ ಆಗಿರುವುದು ಮತ್ತಷ್ಟು ಸಮಸ್ಯೆಯನ್ನುಂಟು ಮಾಡಿದೆ. ಘಾಟಿ ಪ್ರದೇಶಗಳಲ್ಲಿ ಹಲವಾರು ಕಡೆ ಗುಡ್ಡ ಕುಸಿದು ರಸ್ತೆ ಸಂಚಾರ ನಿಂತು ಹೋಗಿದೆ. ಸದ್ಯ ಚಾರ್ಮಾಡಿ ಘಾಟಿಯಲ್ಲಿನ ಸಮಸ್ಯೆ ನಿವಾರಣೆಗೆ ಕನಿಷ್ಟ 2-3 ತಿಂಗಳಾದರೂ ಬೇಕು ಎಂದು ಅಂದಾಜಿಸಲಾಗಿದೆ.
ಘಾಟಿಯಲ್ಲಿ ಜೆಸಿಬಿ ಹಾಗೂ ಹಿಟಾಚಿಗಳಿಂದ ಮಣ್ಣು ತೆರವು ಕಾರ್ಯ ನಿರಂತರ ನಡೆಯುತ್ತಿದೆ. ಕೆಲ ಪ್ರದೇಶಗಳಲ್ಲಿ ಮಣ್ಣು ತೆಗೆಯುವ ಸಂದರ್ಭ ಮತ್ತೆ ಮತ್ತೆ ಕುಸಿತವಾಗುತ್ತಿದ್ದು, ತೀವ್ರ ತೊಂದರೆಯಾಗುತ್ತಿದೆ. ಸದ್ಯ ರಸ್ತೆಗೆ ಬಿದ್ದಿರುವ ಮಣ್ಣುಗಳ ತೆರವು ಕಾರ್ಯ ನಡೆಯುತ್ತಿದ್ದರೂ, ರಸ್ತೆ ದುರಸ್ತಿಗೆ ತಿಂಗಳುಗಳ ಕಾಲ ಸಮಯ ಬೇಕು ಎನ್ನಲಾಗಿದೆ.
ಘಾಟ್ಗಳು ಬಂದ್ ಆಗಿರುವುದರಿಂದ ಈಗ ಬದಲಿ ಮಾರ್ಗ ಅನುಸರಿಸಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಚಾರ್ಮಾಡಿ ಘಾಟ್ನಲ್ಲಿ ಪದೇ ಪದೇ ಗುಡ್ಡ ಕುಸಿಯುತ್ತಿರುವುದರಿಂದ ಕರಾವಳಿಯಿಂದ ಉಳಿದ ಭಾಗಕ್ಕೆ ತೆರಳಬೇಕಾದವರು ಕೂಡ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಚಾರ್ಮಡಿ ಘಾಟ್'ನ ಚಿಕ್ಕಮಗಳೂರು ಬಳಿಯ ರಸ್ತೆಗಳಲ್ಲಿ ಒಂದು ಕಡೆ ಗುಡ್ಡ ಕುಸಿಯುತ್ತಿದ್ದರೆ, ಮತ್ತೊಂದೆಡೆ ರಸ್ತೆಗಳು ಬಿರುಕುಬಿಟ್ಟಿದ್ದು, ಭೂಕುಸಿತಗಳು ಸಂಭವಿಸತೊಡಗಿವೆ. ಇದರಿಂದ ಲಘು ವಾಹನ ಸಂಚಾರ ಸಂಪೂರ್ಣ ನಿಷೇಧಿಸಲಾಗಿದ್ದು, ದ್ವಿಚಕ್ರ ವಾಹನಗಳು ಸಂಚರಿಸಲು ಪರದಾಡುತ್ತಿವೆ.