ಮಂಗಳೂರು ಆ.12(Daijiworld News/RD): ಕರಾವಳಿಯೆಲ್ಲೆಡೆ ಮುಸ್ಲೀಂಮರು ತ್ಯಾಗ ಬಲಿದಾನದ ಸಂಕೇತವಾದ ಪವಿತ್ರ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಕಳೆದ ಹಲವು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜಿಲ್ಲೆ ತತ್ತರಿಸಿ ಹೋಗಿದ್ದು, ಈ ನಡುವೆಯು ಮುಸ್ಲೀಂಮರು ತಮ್ಮ ಪವಿತ್ರ ಹಬ್ಬವನ್ನು ಸರಳ ರೀತಿಯಲ್ಲಿ ಬಹಳ ಸಂಭ್ರಮದ ಮೂಲಕ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಿದ್ದಾರೆ. ಜೊತೆಗೆ ಹಬ್ಬದ ಖರ್ಚನ್ನು ಮಿತಿಗೊಳಿಸಿ ಸಂತೃಸ್ತರಿಗೆ ನೆವಾಗುವ ಮೂಲಕ ತಮ್ಮ ಹಬ್ಬದ ಸಂಭ್ರಮಾಚರಣೆಯನ್ನು ಇಮ್ಮಡಿಗೊಳಿಸಿದ್ದಾರೆ.
ನಗರದ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯುತ್ತಿದ್ದು, ಇಂದು ಮಳೆಯು ಕೊಂಚ ಬಿಡುವುಗೊಳಿಸಿದ ಪರಿಣಾಮವಾಗಿ ಹಬ್ಬದ ಸಡಗರ ಎಲ್ಲಡೆ ಮೂಡಿದೆ. ತ್ಯಾಗ ಬಲಿದಾನದ ಸಂಕೇತವಾಗಿರುವ ಈ ಹಬ್ಬವನ್ನು ದೇಶದೆಲ್ಲೆಡೆ ಮುಸ್ಲೀಂಮರು ಬಹಳ ಸಂಭ್ರಮದಿಂದ ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಸಾವಿರಾರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹಿಂ ಅವರು ಮಾಡಿದ್ದ ತ್ಯಾಗ ಬಲಿದಾನದ ಸ್ಮರಣೆಯನ್ನು ಮಾಡುವುದೇ ಈ ಹಬ್ಬದ ವೈಶಿಷ್ಟ್ಯ. ಹೀಗಾಗಿ ಬಕ್ರೀದ್ ಹಬ್ಬವನ್ನು ಕಡಿಮೆ ಖರ್ಚಿನಲ್ಲಿ ಆಚರಿಸಿ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದ್ದಾರೆ.
ಕುರ್ಬಾನಿ ಅಥವಾ ಈದ್ ಅಲ್ ಅದಾ ಎಂದು ಕರೆಯಲ್ಪಡುವ ಬಕ್ರೀದ್ ಸಾಂಪ್ರದಾಯಿಕವಾಗಿ, ಹಜ್ ತೀರ್ಥ ಯಾತ್ರೆ ಪ್ರಾರಂಭವಾದ ಎರಡು ದಿನಗಳ ನಂತರ ಆಚರಿಸಲಾಗುತ್ತದೆ. ಈ ಹಬ್ಬದ ಪ್ರಾರಂಭದ ದಿನಾಂಕವು ಹೊಸ ಅರ್ಧಚಂದ್ರವನ್ನು ನೋಡುವುದರ ಮೇಲೆ ಅವಲಂಬಿತವಾಗಿರುತ್ತದೆ. ಇದು ಇಸ್ಲಾಂ ಕ್ಯಾಲೆಂಡರ್ ನಲ್ಲಿ ಪವಿತ್ರ ತಿಂಗಳುಗಳ 10 ನೇ ದಿನದಂದು ಪ್ರಾರಂಭವಾಗುತ್ತದೆ.