ಮಂಗಳೂರು,ಆ.12(Daijiworld News/RD): ಕುಲಶೇಖರ ಜ್ಯೋತಿ ನಗರದ ಶ್ರೀ ಧರ್ಮಶಾಸ್ತ ಮಂದಿರ ಟ್ರಸ್ಟ್(ರಿ)ವತಿಯಿಂದ 8ನೇ ವರ್ಷದ ’ಆಟಿಡೊಂಜಿ ಐತಾರ’ ಕಾರ್ಯಕ್ರಮವು ಆ.11 ರ ಭಾನುವಾರ ಜರುಗಿತು. ಕಾರ್ಯಕ್ರಮವನ್ನು ವಂಡರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಸ್ಥಾನ ಪಡೆದ 5 ವರ್ಷ ಪ್ರಾಯದ ಶ್ರೀ ತಕ್ಷಿಲ್ ಎಂ. ದೇವಾಡಿಗ ಉದ್ಘಾಟಿಸಿದರು.
ಆಟಿದ ಮದಿಪ್ಪುನ್ನು ಯಕ್ಷಗುರು ಡಾ| ದಿನಕರ್ ಎಸ್. ಪಚ್ಚನಾಡಿ ನೀಡಿದರು. ಅಧ್ಯಕ್ಷತೆಯನ್ನು ಮಂದಿರದ ಮ್ಯಾನೆಜಿಂಗ್ ಟ್ರಸ್ಟಿ ನ್ಯಾಯವಾದಿ ರಾಮಪ್ರಸಾದ್ ಎಸ್. ರವರು ವಹಿಸಿದ್ದರು. ಮಂದಿರದ ಟ್ರಸ್ಟಿ ಶ್ರೀ ದಯಾನಂದ ಕತ್ತಲ್ ಸಾರ್ ಬರೆದ "ಆಟಿ" ತುಳು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಧರ್ಮಶಾಸ್ತ ಯಕ್ಷವೃಂದದ ವತಿಯಿಂದ ಯಕ್ಷಗಾನ ಗುರುಗಳಾದ ಡಾ| ದಿನಕರ್ ಎಸ್. ಪಚ್ಚನಾಡಿಯವರನ್ನು ಗುರುವಂದನೆ ಸಲ್ಲಿಸಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮಾಜಿ ಮೇಯರ್ ಶ್ರೀ ಬಾಸ್ಕರ ಕೆ, ಫೋರ್ ವಿಂಡ್ಸ್ ಮಾಸ್ ಕಮ್ಯೂನಿಕೇಶನ್ ಸರ್ವಿಸಸ್ ನಿರ್ದೇಶಕ ಶ್ರೀ ಇ. ಫೆರ್ನಾಂಡಿಸ್, ದೈಜಿವಲ್ಡ್ ವಾಹಿನಿಯ ಶ್ರೀ ಪ್ರವೀಣ್ ತಾವ್ರೊ, ತುಳುವಾರಾಯೇನ ಕೂಟದ ಯಾದವ ಕೊಲ್ಯಾನ್ ಸಂದರ್ಭೋಚಿತವಾಗಿ ಮಾತನಾಡಿದರು. ತುಳುವ ಬೊಳ್ಳಿ ದಯಾನಂದ ಕತ್ತಲ್ ಸಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ತುಳುವ ನೃತ್ಯ, ತೆಂಗಿನ ಕಾಯಿ ಕುಟ್ಟುವ ಸ್ಪರ್ಧೆ ಮುಂತಾದ ತುಳುವರ ಸಾಂಸ್ಕೃತಿಕ ಸ್ಪರ್ಧೆಗಳು ಜರುಗಿದವು.
ಶ್ರೀ ಧರ್ಮಶಾಸ್ತ ಮಾತೃ ಮಂಡಳಿಯ ಸದಸ್ಯರು ಸುಮಾರು 35 ಬಗೆಯ ಖಾದ್ಯಗಳನ್ನು ತಯಾರಿಸಿ ಉಣಬಡಿಸಿದರು. ಶ್ರೀ ಮಹಾಲಿಂಗೇಶ್ವರ ಭಟ್ ಸ್ವಾಗತಿಸಿ, ಶ್ರೀ ಆಶೀಕ್ ಕೆ. ವಂದಿಸಿದರು. ವೇದಿಕೆಯಲ್ಲಿ ಸೇವಾ ಸಮಿತಿಯ ಗೌರವಾಧ್ಯಕ್ಷ ಶ್ರೀ ಕೃಷ್ಣಪ್ಪ ಟೈಲರ್, ಮಾತೃ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸುಮಿತ್ರ, ಯಕ್ಷವೃಂದದ ಸಂಚಾಲಕ ಶ್ರೀ ದಿನೇಶ್, ಯುವ ಸೇನಾ ಸಮಿತಿಯ ಅಧ್ಯಕ್ಷೆ ಕುಮಾರಿ ಅಂಜುಶ್ರೀ ಉಪಸ್ಥಿತರಿದ್ದರು. ನಾಡಿನಾದ್ಯಂತ ಸುರಿಯುತ್ತಿರುವ ಅತಿವೃಷ್ಟಿ ತಗ್ಗಬೇಕೆಂದು ಹಾಗೂ ಸಂತ್ರಸ್ತರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಧರ್ಮಶಾಸ್ತ್ರ ಮಂದಿರದಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು.