ಮಂಗಳೂರು/ಪುತ್ತೂರು, ಆ.12(Daijiworld News/SS): ಪುತ್ತೂರು ತಾಲೂಕಿನ ಕಬಕದ ಮುರ ನಿವಾಸಿ ಚಂದ್ರಶೇಖರ್ ಎಂಬವರು ಮಾರಣಾಂತಿಕ ರೋಗದಿಂದ ಬಳಲುತ್ತಿದ್ದು, ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದು, ಕ್ಷೌರಿಕ ವೃತ್ತಿಯನ್ನು ಕಸುಬಾಗಿಸಿಕೊಂಡು ಸಂಸಾರ ನಡೆಸುತ್ತಿದ್ದರು. ಆದರೆ ಇದ್ದಕ್ಕಿದಂತೆ ಚಂದ್ರಶೇಖರ್ ಅವರ ಗಂಟಲಲ್ಲಿ ನೋವು ಕಾಣಿಸಿದ್ದು, ಮಂಗಳೂರಿನ ದೇರಳಕಟ್ಟೆಯ ಆಸ್ಪತ್ರೆಗೆ ಭೇಟಿ ನೀಡಿದಾಗ ಗಂಟಲು ಕ್ಯಾನ್ಸರ್ ಎಂದು ವೈದರು ತಿಳಿಸಿರುತ್ತಾರೆ.
ಸದ್ಯ ಕಡು ಬಡತನದ ನಡುವೆ ಮನೆ ಯಜಮಾನನಿಗೆ ಬಾಧಿಸಿದ ಮಾರಕ ಖಾಯಿಲೆಯಿಂದ ಕುಟುಂಬಕ್ಕೆ ದಿಕ್ಕು ತೋಚಾದಾಗಿದ್ದು, ಇದೀಗ ದಾನಿಗಳ ಸಹಕಾರವನ್ನು ಕೋರಿದ್ದಾರೆ.
ನಗರದ ಪಚ್ಚನಾಡಿ ಆಶ್ರಯ ಕಾಲೋನಿಯಲ್ಲಿ ವಾಸವಾಗಿರುವ ದುರ್ಗಾಪ್ರಸಾದ್ (18 ವರ್ಷ) ಅನಾರೋಗ್ಯಕ್ಕೀಡಾಗಿದ್ದು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ದುರ್ಗಾಪ್ರಸಾದ್ ತಾಯಿ, ಇಬ್ಬರು ಅಕ್ಕಂದಿರು ಹಾಗೂ ಅಜ್ಜಿಯೊಂದಿಗೆ ಬಡ ಕುಟುಂಬವೊಂದರಲ್ಲಿ ವಾಸವಾಗಿದ್ದು, ತನ್ನ ಮನೆಗೆ ಅಧಾರವಾಗಿದ್ದರು. ಆದರೆ ಇದೀಗ ದುರ್ಗಾಪ್ರಸಾದ್ ಇವರಿಗೆ ಅಪಘಾತವಾಗಿದ್ದು, ಕಾಲಿಗೆ ತೀವ್ರ ಪೆಟ್ಟಾಗಿದೆ. ಪರಿಣಾಮ, ಒಂದು ವರ್ಷಗಳವರೆಗೆ ಕಾಲು ನೆಲಕ್ಕೆ ಇಡಬಾರದೆಂದು ವೈದ್ಯರು ಸಲಹೆಯನ್ನು ಕೊಟ್ಟಿರುತ್ತಾರೆ.
ದುರ್ಗಾಪ್ರಸಾದ್ ಅವರ ತಾಯಿ ಪದ್ಮಾವತಿ ಕೂಲಿಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ತುಂಬಾ ಕಷ್ಟಕರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದೀಗ ಈ ಕುಟುಂಬದ ನೆರವಿಗೆ ಅಮೃತಸಂಜೀವಿನಿ ಎಂಬ ಪುಟ್ಟ ಸಂಘಟನೆ ನಿಂತಿದ್ದು ಸಹಾಯದ ನಿರೀಕ್ಷೆಯಲ್ಲಿದ್ದಾರೆ.
ಮಂಗಳೂರಿನ ಬಜಾಲ್ ಸಮೀಪದ ಪೈಸಲ್ ನಗರ ನಿವಾಸಿ ಜಯಲಕ್ಷ್ಮಿ ಎಂಬವರು ಅನಾರೋಗ್ಯದ ಜೊತೆಗೆ ಸೂಕ್ತ ಸೂರಿನ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಜಯಲಕ್ಷ್ಮಿ ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡಿದ್ದು, ಇಂದೋ ನಾಳೆಯೋ ಮುರಿದು ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ಒಬ್ಬರೆ ಜೀವನ ಸಾಗಿಸುತ್ತಿದ್ದಾರೆ. ಇವರ ಅಣ್ಣಂದಿರು ಇವರನ್ನು ಬಿಟ್ಟು ಹೆಂಡತಿ ಮಕ್ಕಳೊಂದಿಗೆ ಬೇರೆ ಮನೆ ಮಾಡಿ ವಾಸವಾಗಿದ್ದಾರೆ. ಬಾಲ್ಯದಿಂದ ಮೂರ್ಛೆರೋಗ ಹಾಗೂ ತಲೆಸುತ್ತುವ ರೋಗವಿರುವುದರಿಂದ ಇವರು ಅವಿವಾಹಿತೆಯಾಗಿದ್ದು, ಮನೆಯೂ ಬೀಳುವ ಪರಿಸ್ಥಿತಿಯಲ್ಲಿದೆ. ಜಯಲಕ್ಷ್ಮಿ ಅವರ ಆರೋಗ್ಯ ಪದೇ ಪದೇ ಹದಗೆಡುವ ಕಾರಣ, ಬೀಡಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಇವರ ಕಷ್ಟದ ಪರಿಸ್ಥಿತಿಯನ್ನು ಅರಿತ ಅಮೃತಸಂಜೀವಿನಿಯ ಸದಸ್ಯರು ಸಹಾಯ ನೀಡುವ ಭರವಸೆಯನ್ನು ಕೊಟ್ಟಿದ್ದು, ಉದಾರ ಮನಸ್ಸಿನ ದಾನಿಗಳ ನೆರವು ಕೋರಿದ್ದಾರೆ.
ಸಹಾಯ ಮಾಡಲು ಇಚ್ಛಿಸುವವರು +919743514603, +918904177609, +918147697946 ದೂರವಾಣಿ ಸಂಪರ್ಕಿಸಬಹುದು.