ಬೆಳ್ತಂಗಡಿ: ಸಂತ್ರಸ್ತರಿಗೆ ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ಪರಿಹಾರ - ಸಿಎಂ
Mon, Aug 12 2019 03:33:00 PM
ಬೆಳ್ತಂಗಡಿ, ಆ 12 (Daijiworld News/MSP): ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಹಾಗೂ ಮಳೆ ಹಾನಿ ಪರಿಶೀಲನೆಗಾಗಿ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬೆಳ್ತಂಗಡಿಗೆ ಬೇಟಿ ನೀಡಿ ನೆರೆ ಸಂತ್ರಸ್ತರ ಜೊತೆಗೆ ಮಾತುಕತೆ ನಡೆಸಿ, ಪ್ರವಾಹದಲ್ಲಿ ಮನೆ ಸಂಪೂರ್ಣವಾಗಿ ನಾಶವಾದ ಸಂತ್ರಸ್ತರಿಗೆ ಹೊಸಮನೆ ನಿರ್ಮಾಣಕ್ಕೆ ತಲಾ 5ಲಕ್ಷ ರೂ ಪರಿಹಾರ ನೀಡಲಾಗುವುದು ಹಾಗೂ ಮನೆ ಹಾನಿಗೊಳಗಾದ ಸಂತ್ರಸ್ತರಿಗೆ ಒಂದು ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದ ಸಿಎಂ ಬೆಳ್ತಂಗಡಿ ಗೆ ತೆರಳಿ ನೆರೆಯಿಂದ ಕೊಚ್ಚಿ ಹೋದ ಕುಕ್ಕಾವು ಸೇತುವೆಗೆ ಭೇಟಿ ನೀಡಿದ ಬಳಿಕ ಕುಕ್ಕಾವು ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಸಂತ್ರಸ್ತರಿಗೆ ತಕ್ಷಣ ಹತ್ತು ಸಾವಿರ ರೂಪಾಯಿ ಹಾಗೂ ಮನೆ ನಿರ್ಮಾಣವಾಗುವವರೆಗೆ ಬಾಡಿಗೆ ಮನೆಯಲ್ಲಿ ವಾಸಿಸಲು ಬಾಡಿಗೆ ನೀಡಲು ಮಾಸಿಕ ತಲಾ 5 ಸಾವಿರ ನೀಡಲಾಗುವುದು. ಮಾತ್ರವಲ್ಲದೆ ಹಾನಿ ಗೀಡಾದ ರಸ್ತೆ, ಸೇತುವೆ ತಡೆಗೋಡೆ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
ಈ ಸಂದರ್ಭ ಜಿಲ್ಲೆಗೆ ವಿಶೇಷ ಅನುದಾನ ನೀಡುವಂತೆ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಹಾಗೂ ಕೆ ಹರೀಶ್ ಕುಮಾರ್ ಸಿಎಂಗೆ ಮನವಿ ಸಲ್ಲಿಸಿದರು.ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಹರೀಶ್ ಪೂಂಜ, ವೇದವ್ಯಾಸ್ ಕಾಮತ್ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮೊದಲಾದವರು ಉಪಸ್ಥಿತರಿದ್ದರು.