ಕಾಸರಗೋಡು ಡಿ 20 : ಕರ್ನಾಟಕ ಮೂಲದ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಡಿ 20 ಬುಧವಾರ ಪೆರ್ಲದಲ್ಲಿ ನಡೆದಿದೆ. ಮೂಲತಃ: ಹಾಸನದ ಅಣ್ಣಪ್ಪ ಎಂಬರ ಪತ್ನಿ ಪೂರ್ಣಿಮಾ ( 24) ಮೃತಪಟ್ಟವರು. ಈಕೆಯ ಮೃತದೇಹ ಇಂದು ಬೆಳಿಗ್ಗೆ ಪೆರ್ಲ ಪೇಟೆಯ ಖಾಸಗಿ ಶಾಲೆಯೊಂದರ ಪರಿಸರದ ಬಾವಿಯಲ್ಲಿ ಪತ್ತೆಯಾಗಿದೆ. ಅಣ್ಣಪ್ಪ ಮತ್ತು ಪೂರ್ಣಿಮಾ ಕಳೆದ ಮೂರು ವರ್ಷಗಳಿಂದ ಎಣ್ಮಕಜೆ ಗ್ರಾಮ ಪಂಚಾಯತ್ ನ ಸ್ವಚ್ಛತಾ ಕಾರ್ಮಿಕನಾಗಿ ಪೆರ್ಲ ಪೇಟೆಯಲ್ಲಿ ದುಡಿಯುತ್ತಿದ್ದನು. ಈ ದಂಪತಿ ಪೆರ್ಲ ಪೇಟೆಯಲ್ಲಿರುವ ರೇಡಿಯೋ ನಿಲಯದ ಕಟ್ಟಡದಲ್ಲಿ ವಾಸವಾಗಿದ್ದರು. ಸೋಮವಾರ ರಾತ್ರಿ ಯಿಂದ ಪೂರ್ಣಿಮಾ ನಾಪತ್ತೆಯಾಗಿದ್ದು , ಹುಡುಕಾಟ ನಡೆಸುತ್ತಿದ್ದನು ಎನ್ನಲಾಗಿದೆ. ಪತ್ನಿ ನಾಪತ್ತೆಯಾಗಿರುವುದಾಗಿ ಅಣ್ಣಪ್ಪ ಹಲವರಲ್ಲಿ ಹೇಳಿದ್ದನು ಎನ್ನಲಾಗಿದೆ. ಈ ನಡುವೆ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದ್ದು , ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಹಾಗೂ ಬದಿಯಡ್ಕ ಠಾಣಾ ಪೊಲೀಸರು ಮೃತದೇಹ ವನ್ನು ಮೇಲಕ್ಕೆತ್ತಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದೆ. ಪತ್ನಿ ನಾಪತ್ತೆಯಾಗಿದ್ದರೂ ಪತಿ ಅಣ್ಣಪ್ಪ ಪೊಲೀಸರಿಗೆ ದೂರು ನೀಡಿರಲಿಲ್ಲ. ಅಣ್ಣಪ್ಪನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ .
ಇಬ್ಬರ ನಡುವೆ ದಿನಂಪ್ರತಿ ರಾತ್ರಿ ಜಗಳವಾಗುತ್ತಿತ್ತು ಎಂದು ಪರಿಸರವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ . ಬದಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ