ಉಡುಪಿ, ಆ 13 (Daijiworld News/MSP): ಸೋಮವಾರ ಬೆಳಗ್ಗೆ 6:30ರ ಸುಮಾರಿಗೆ ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದಲ್ಲಿರುವ ಮಲ್ಪೆ ಫ್ರಶ್ ಮರೈನ್ ಎಕ್ಸ್ಫೋರ್ಟ್ ಮೀನು ಸಂಸ್ಕರಣ ಘಟಕದಲ್ಲಿ ಅಮೋನಿಯ ಅನಿಲ ಸೋರಿಕೆಯಿಂದ ಅಲ್ಲಿ 75 ಮಂದಿ ಕಾರ್ಮಿಕರು ಅಸ್ವಸ್ಥ ಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆಯ ಕುರಿತಂತೆ ಸಮಗ್ರ ತನಿಖೆ ನಡೆಸಲು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶಿಸಿದ್ದಾರೆ.
ಘಟನೆಯಲ್ಲಿ ಅನಿಲ ಸೋರಿಕೆ ಘಟನೆಯಿಂದ 68ನ ಮಹಿಳಾ ಹಾಗೂ ಏಳು ಮಂದಿ ಮಹಿಳಾ ಕಾರ್ಮಿಕರು ಅಸ್ವಸ್ಥಗೊಂಡಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಇಬ್ಬರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ತನಿಖೆಗಾಗಿ ಕುಂದಾಪುರದ ಸಹಾಯಕ ಕಮಿಷನರ್ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಸಮಿತಿಯಲ್ಲಿ ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು, ಜಿಲ್ಲಾ ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ, ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು, ಉಡುಪಿ ಜಿಲ್ಲೆ ಪರಿಸರ ಮಾಲಿನ್ಯ ನಿಯಂತ್ರಮ ಮಂಡಳಿಯ ಪರಿಸರ ಅಧಿಕಾರಿ, ಜಿಲ್ಲಾ ಆರೋಗ್ಯ ಇಲಾಖೆಯ ಡಿಎಚ್ಓ ಇವರೆಲ್ಲಾ ತನಿಖಾ ತಂಡದ ಸದಸ್ಯರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ದೇವಲ್ಕುಂದದಲ್ಲಿ ಮೀನುಗಳನ್ನು ದಾಸ್ತಾನು ಮಾಡಿ ವಿದೇಶಕ್ಕೆ ರಫ್ತು ಮಾಡುವ ಮಲ್ಪೆ ಫ್ರಶ್ ಮರೈನ್ ಎಕ್ಸ್ಫೋರ್ಟ್ ಪ್ರೈವೆಟ್ ಲಿ. ಎಂಬ ಹೆಸರಿನ ಮೀನು ಸಂಸ್ಕರಣ ಕಾರ್ಖಾನೆ 2017ರ ಆಗಸ್ಟ್ ತಿಂಗಳಲ್ಲಿ ಪ್ರಾರಂಭಗೊಂಡಿದ್ದು, ಇದರಲ್ಲಿ ಆಡಳಿತ ವರ್ಗದ 91 ಜನ ಸೇರಿ ಸುಮಾರು 401 ನೌಕರು ಕೆಲಸ ಮಾಡುತ್ತಿದ್ದರು.