ಬಂಟ್ವಾಳ, ಆ 13 (DaijiworldNews/SM): ಬಿ.ಮೂಡ ಗ್ರಾಮಕರಣಿಕರೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಊಟೋಪಚಾರಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿ ನೆರೆ ಸಂತ್ರಸ್ತರೊಬ್ಬರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ.
ತಾಲೂಕಿನ ಬಿ.ಮೂಡ ಗ್ರಾಮದ ತಲಪಾಡಿ ನಿವಾಸಿ, ನೆರೆ ಸಂತ್ರಸ್ತ ಲತೀಫ್ ಬಿ.ಸಿ. ಎಂಬವರು ಈ ದೂರು ನೀಡಿದ್ದಾರೆ. ಕಳೆದ ವಾರದಿಂದ ಭಾರೀ ಮಳೆಯಿಂದಾಗಿ ನೆರೆ ಬಂದು ತನ್ನ ಮನೆ ಸಹಿತ ಸುತ್ತಮುತ್ತಲಿನ ಮನೆಗಳೂ ಜಲಾವೃತಗೊಂಡಿತ್ತು. ಈ ನಿಟ್ಟಿನಲ್ಲಿ ಆಗಸ್ಟ್ 12ರಂದು ಬೆಳಿಗ್ಗೆ 11:30ರ ಸುಮಾರಿಗೆ ಗ್ರಾಮಕಣಿಕರು ಹಾಗೂ ಇತರ ಸಿಬ್ಬಂದಿ ತಲಪಾಡಿ ಪ್ರದೇಶದ ನೆರೆ ಸಂತ್ರಸ್ತರ ಸರ್ವೇ ಕಾರ್ಯಕ್ಕಾಗಿ ತಮ್ಮ ಮನೆಗೆ ಬಂದು ಅರ್ಜಿಗಳನ್ನು ಭರ್ತಿ ಮಾಡಿದ್ದಾರೆ.
ಆದರೆ, ಅಂದು ರಾತ್ರಿ 10:15ರ ಸುಮಾರಿಗೆ ವಿಎಯ ಹೆಸರಿನಲ್ಲಿ ತನಗೆ ಕರೆ ಮಾಡಿ, "ನೆರೆ ಬಂದ 14 ಮನೆಗಳಿಗೆ ಸರ್ವೇ ಮಾಡಲು ನಮಗೆ ನೀನು ಉಪಚರಿಸಿಲ್ಲ. ಅದಲ್ಲದೆ, ಕುಡಿಯಲು ನೀರು ಕೊಡಲು ಯೋಗ್ಯತೆ ಇಲ್ಲ. ನಿನಗೆ ಅಹಂಕಾರ ಇದೆ ಎಂದೇಳಿ" ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.