ಬೆಳ್ತಂಗಡಿ, ಆ 13 (DaijiworldNews/SM): ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ದಿಡುಪೆ, ಮಲವಂತಿಗೆ, ಕುಕ್ಕಾವು ಇನ್ನಿತರ ಪ್ರದೇಶಗಳಲ್ಲಿ ಪ್ರಕೃತಿ ವಿಕೋಪದಿಂದ ಬಹಳಷ್ಟು ಹಾನಿಯಾಗಿದ್ದು ಇದರ ತ್ವರಿತ ನಿರ್ವಹಣೆ ಹಾಗೂ ತಕ್ಷಣ ಪರಿಹಾರ ನೀಡುವ ಉದ್ದೇಶದಿಂದ ಕೊಡಗು ಪ್ರವಾಹ ಪರಿಸ್ಥಿತಿಯಲ್ಲಿ ನಿರ್ವಹಣೆಗೈದ ನುರಿತ ಇಬ್ಬರು ಸಹಾಯಕ ಕಮಿಷನರ್ಗಳನ್ನು ನೇಮಕ ಮಾಡಲಾಗಿದ್ದು ಅವರು ಪರಿಸ್ಥಿತಿಯನ್ನು ಅವಲೋಕನ ಮಾಡಲಿದ್ದಾರೆ ಎಂದು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸಿಂಥಿಲ್ ಹೇಳಿದ್ದಾರೆ.
ಅವರು ಮಂಗಳವಾರ ಬೆಳ್ತಂಗಡಿ ಮಿನಿ ವಿಧಾನಸೌಧದದಲ್ಲಿ ಪ್ರಕೃತಿ ವಿಕೋಪ ಪರಿಹಾರದ ಕುರಿತು ವಿವಿಧ ಅಧಿಕಾರಿಗಳ ಸಭೆಯನ್ನು ನಡೆಸಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿ ಸಂತೋಷ್ ಹಾಗೂ ನಾಗರಾಜ್ ಎಂಬವರನ್ನು ಎರಡು ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಇವರು ಮಲವಂತಿಗೆ ಹಾಗೂ ನೆರಿಯ ಎಂಬ ಎರಡು ಪತ್ರೇಕ ವಿಭಾಗಗಳನ್ನು ನಡೆಸಿ ಇದರಲ್ಲಿ ಉಳಿದ ಗ್ರಾಮಗಳನ್ನು ಸೇರಿಸಿಕೊಂಡು 10 ತಂಡಗಳನ್ನು ರಚಿಸಿ ಅಲ್ಲಿನ ಸ್ಥಳೀಯ ಅಧಿಕಾರಿಗಳನ್ನು ಸೇರಿಸಿಕೊಂಡು ಪರಿಹಾರ ಹಾನಿ ಮತ್ತು ತುರ್ತು ನೆರವು ನೀಡುವ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ.
ಮುಖ್ಯಮಂತ್ರಿಗಳ ಆದೇಶದಂತೆ ಸಂಪೂರ್ಣ ಮನೆ ಕಳೆದುಕೊಂಡವರಿಗೆ 5 ಸಾವಿರ ರೂ. ಮನೆ ಬಾಡಿಗೆ, ಮನೆ ನಿರ್ಮಿಸುವವರಿಗೆ ತಾತ್ಕಾಲಿಕವಾಗಿ 1ಲಕ್ಷ ರೂ ಪರಿಹಾರ, ಪೂರ್ತಿ ಮನೆ ನಿರ್ಮಿಸುವವರಿಗೆ 5 ಲಕ್ಷ ರೂಗಳ ಪರಿಹಾರವನ್ನು ನೀಡಲಾಗುತ್ತಿದ್ದು ನೆರೆ ಪರಿಹಾರಕ್ಕಾಗಿ ತಾತ್ಕಾಲಿಕವಾಗಿ 10ಸಾವಿರ ರೂ ಗಳ ಪರಿಹಾರವನ್ನು ನೀಡಲಾಗುತ್ತಿದ್ದು ಇದನ್ನು ಮಂಗಳವಾರ ಮಧ್ಯಾಹ್ನದಿಂದಲೇ ಚೆಕ್ ಕೊಡುವ ಮೂಲಕ ಕಾರ್ಯ ಆರಂಭಿಸಲಾಗುತ್ತದೆ ಎಂದರು.
ಸಂಪೂರ್ಣ ಸ್ವತ್ತು ಕಳೆದುಕೊಂಡವರಿಗೆ ಸ್ಥಳೀಯ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮಾಹಿತಿ ಆಧಾರದಲ್ಲೇ ಪರಿಹಾರ ಕೊಡಲು ಕ್ರಮ ಕೈಗೊಳ್ಳುತ್ತಿದ್ದು ಪ್ರಸ್ತುತ 5 ಜಾನುವಾರುಗಳು ಸಾವನ್ನಪ್ಪಿದ ಬಗ್ಗೆ ವರದಿ ಇದೆ. ಈ ಹಾನಿಯ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ಇದಕ್ಕೂ ಸಂಬಂದಪಟ್ಟ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಈಗಾಗಲೇ ಎರಡು ಗೋಶಾಲೆಗಳನ್ನು ಪ್ರಾರಂಭಿಸಿದ್ದು ಇಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಕೃಷಿ ನಾಶದ ಬಗ್ಗೆ ಕೃಷಿ ಇಲಾಖಾಧಿಕರಿಗಳ ಮತ್ತು ಕಂದಾಯ ಇಲಾಖಾಧಿಕಾರಿಗಳು ಸರ್ವೆ ಕಾರ್ಯ ನಡೆಸುತ್ತಿದ್ದು ಎಲ್ಲಾ ರೀತಿಯ ಪರಿಹಾರವನ್ನು ನೀಡಲಾಗುವುದು ಎಂದರು.
ರಸ್ತೆ ಹಾನಿ ಮತ್ತು ಪರಿಹಾರ ಪೀಡಿತ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ತಾತ್ಕಾಲಿಕ ಅಗತ್ಯವಿರುವ ಬಗ್ಗೆ ಚರ್ಚಿಸಲಾಗುತ್ತಿದ್ದು ಈ ಬಗ್ಗೆ ಸಂಬಂದಪಟ್ಟ ಇಲಾಖೇಯೊಂದಿಗೆ ಚರ್ಚಿಸಲಾಗುತ್ತಿದೆ. ಈ ಅನಾಹುತವು ಅವೈಜ್ಞಾನಿಕ ರೀತಿಯಲ್ಲಿ ನಡೆದಿರುವುದರಿಂದ ರಸ್ತೆ ಹಾಗೂ ಸೇತುವರಗಳ ತಾತ್ಕಾಲಿಕ ಪರಿಹಾರದ ಬಗ್ಗೆ ವೈಜ್ಞಾನಿಕವಾಗಿ ಚರ್ಚಿಸಲಾಗುತ್ತಿದೆ ಎಂದರು.