ಬೆಳ್ತಂಗಡಿ, ಆ 13 (DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಲವೆಡೆ ಪ್ರಾಕೃತಿಕ ವಿಕೋಪ ನೆರೆ ಹಾವಳಿಯಿಂದಾಗಿ ಹಲವು ಪ್ರದೇಶಗಳಿಗೆ ಹಾನಿ ಸಂಭವಿಸಿದೆ. ಹಲವು ಮನೆಮಠಗಳಿಗೆ ಪೂರ್ಣ ಹಾಗೂ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಕೃಷಿ ಜಮೀನಿಗೂ ಹಾನಿ ಸಂಭವಿಸಿದೆ.
ಈ ನಡುವೆ ಕೆಲವೊಂದು ವಿಸ್ಮಯಗಳು ನಡೆದಿವೆ. ಇವುಗಳು ನಾಸ್ತಿಕರಿಗೆ ಸವಾಲು ಎನ್ನುವಂತೆ ತುಳುನಾಡಿನ ದೈವದ ಶಕ್ತಿಯನ್ನು ಎತ್ತಿ ತೋರಿಸುತ್ತಿವೆ. ಬೆಳ್ತಂಗಡಿ ತಾಲೂಕಿನ ದಿಡುಪೆಯ ಪ್ರದೇಶದಲ್ಲಿ ನೆರೆಹಾವಳಿಗೆ ಗುಡ್ಡ ಕುಸಿದು ಮರಗಳ ಜೊತೆಗೆ ನದಿಯಲ್ಲಿ ತೇಲಿ ಬಂದು ಸೇತುವೆ ಹಾಗೂ ಅಕ್ಕಪಕ್ಕದಲ್ಲಿರುವ ಮನೆಗಳನ್ನು ಮತ್ತು ಕೃಷಿ ಭೂಮಿಗಳನ್ನು ಬಿಡದೆ ಸರ್ವನಾಶ ಮಾಡಿದೆ.
ಆದರೆ ಇದೇ ಭಾಗದಲ್ಲಿರುವ ರಕ್ತೇಶ್ವರಿ ಹಾಗೂ ಗುಳಿಗನ ಸಾನಿಧ್ಯಕ್ಕೆ ಯಾವುದೇ ಹಾನಿಯುಂಟಾಗಿಲ್ಲ. ಇವುಗಳ ಪಕ್ಕದಲ್ಲೇ ಬೃಹದಾಕಾರದ ಮರಗಳು ಕೊಚ್ಚಿ ಬಂದಿದ್ದರೂ ರಕ್ತೇಶ್ವರಿ ಹಾಗೂ ಗುಳಿಗನ ಸಾನಿಧ್ಯಕ್ಕೆ ಅವುಗಳು ತಾಗಿಲ್ಲ. ಇದರಿಂದಾಗಿ ಇಲ್ಲಿನ ಸ್ಥಳೀಯರು ನಂಬಿಕೊಂಡು ಬಂದಿರುವ ರಕ್ತೇಶ್ವರಿ ಹಾಗೂ ಗುಳಿಗ ದೈವಗಳ ಕಾರ್ಣಿಕದ ಬಗ್ಗೆ ಮಾತನಾಡುತ್ತಿದ್ದು, ನಿಜಕ್ಕೂ ವಿಸ್ಮಯಕಾರಿಯಾಗಿದೆ.