ಮಂಗಳೂರು, ಆ.14(Daijiworld News/SS): ಭಾರಿ ಮಳೆಗೆ ಮಂಗಳೂರು ಪಚ್ಚನಾಡಿ ಡಂಪಿಂಗ್ ಯಾರ್ಡ್'ನ ತ್ಯಾಜ್ಯ ರಾಶಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಪಚ್ಚನಾಡಿಯ ಡಂಪಿಂಗ್ ಯಾರ್ಡ್ನಲ್ಲಿ ತ್ಯಾಜ್ಯ ರಾಶಿ ಕುಸಿದು ಬೀಳುತ್ತಿರುವುದು ಪ್ರತಿ ದಿನ ಮುಂದುವರಿಯುತ್ತಲೇ ಇದೆ. 15 ಎಕರೆ ವ್ಯಾಪ್ತಿಯಲ್ಲಿ 75 ಮೀಟರ್ ಎತ್ತರದಲ್ಲಿ ಹರಿದು ಬಂದ ತ್ಯಾಜ್ಯ ಮಂದಾರ ಪ್ರದೇಶದಲ್ಲಿದ್ದ ಅಡಕೆ, ತೆಂಗಿನ ತೋಟವನ್ನು ಸಂಪೂರ್ಣ ಆಪೋಶನ ಪಡೆದಿದೆ. ದಿನೇ ದಿನೇ ತ್ಯಾಜ್ಯ ಮುಂದಕ್ಕೆ ಹರಿಯುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಭಾರಿ ಮಳೆಗೆ ಮಂಗಳೂರು ಪಚ್ಚನಾಡಿ ಡಂಪಿಂಗ್ ಯಾರ್ಡ್'ನಲ್ಲಿ ಮಣ್ಣು ಸೇರಿದಂತೆ ತ್ಯಾಜ್ಯದ ರಾಶಿ ಸಂಪೂರ್ಣವಾಗಿ ಕುಸಿದಿದ್ದು, ಪಚ್ಚನಾಡಿ ಬಳಿಯ ಮಂದಾರದಲ್ಲಿರುವ ಮನೆ ಸೇರಿದಂತೆ ಅಪಾರದ ಕೃಷಿ ಭೂಮಿಗೆ ಹಾನಿಯಾಗಿದೆ. ಎಕರೆಗಟ್ಟಲೆ ಕೃಷಿ ಭೂಮಿ ಸಂಪೂರ್ಣವಾಗಿ ಹಾನಿಗೊಳಗಾಗಿರುವುದರಿಂದ ಸ್ಥಳೀಯರು ಆತಂಕದಲ್ಲಿದ್ದಾರೆ.
ತ್ಯಾಜ್ಯ ಕುಸಿತ ಸ್ಥಳದಲ್ಲಿ ಮತ್ತೆ ನಗರದ ತ್ಯಾಜ್ಯಗಳನ್ನು ತಂದು ಸುರಿದಿದ್ದಾರೆ. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿದಾಗ ಸ್ಥಳೀಯರು ಒಟ್ಟು ಸೇರಿ ಮತ್ತೆ ಇದೇ ಸ್ಥಳದಲ್ಲಿ ತ್ಯಾಜ್ಯ ತಂದು ಸುರಿಯದಂತೆ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಪಚ್ಚನಾಡಿಯ ಡಂಪಿಂಗ್ ಯಾರ್ಡ್ಗೆ ಬೆಂಕಿ ಬಿದ್ದು ವಾಸನೆಯಿಂದ ಸ್ಥಳೀಯವಾಗಿ ಆತಂಕ ಸೃಷ್ಟಿಯಾಗಿತ್ತು. ಬೆಂಕಿ ವ್ಯಾಪಿಸದಂತೆ ಅಮದು ತ್ಯಾಜ್ಯ ರಾಶಿಗೆ ಮಣ್ಣು ಸುರಿಯಲಾಗಿತ್ತು. ಆದರೆ, ಇದೀಗ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮಣ್ಣಿನ ಮೇಲೆ ಮಳೆನೀರು ನಿಂತು ತ್ಯಾಜ್ಯ ರಾಶಿ ಕುಸಿದು ಬೀಳಲು ಆರಂಭಿಸಿದೆ. ತ್ಯಾಜ್ಯ ರಾಶಿ ಕುಸಿದು ಬೀಳುತ್ತಿರುವುದರಿಂದ ಸ್ಥಳೀಯರನ್ನು ಆತಂಕ್ಕೀಡುಮಾಡಿದೆ.