ಮಂಗಳೂರು, ಆ.14(Daijiworld News/SS): ನಗರದ ಹೊರವಲಯದ ಉಳಾಯಿಬೆಟ್ಟು ಎಂಬಲ್ಲಿ ಶಾಲೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಫಲ್ಗುಣಿ ನದಿಗೆ ಉರುಳಿ, ಏಳು ವಿದ್ಯಾರ್ಥಿಗಳು ಸೇರಿದಂತೆ 11 ಮಂದಿ ಮೃತಪಟ್ಟ ಘಟನೆ ನಡೆದು, ಇಂದಿಗೆ ಹನ್ನೊಂದು ವರ್ಷ.
2008ರ ಆ.14. ಊರಿಗೆ ಊರೇ ಕಣ್ಣೀರಿಟ್ಟ ದಿನ. ಮಂಗಳೂರು- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಪೆರ್ಮಂಕಿ ಗ್ರಾಮದ ಉಳಾಯಿಬೆಟ್ಟು ಎಂಬಲ್ಲಿ ಶಾಲೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಫಲ್ಗುಣಿ ನದಿಗೆ ಉರುಳಿತ್ತು. ಅದರಲ್ಲಿದ್ದ ಏಳು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 11 ಮಂದಿ ದಾರುಣವಾಗಿ ಮೃತ್ಯುವಶವಾಗಿದ್ದರೆ, 22 ಮಂದಿಯನ್ನು ರಕ್ಷಿಸಲಾಗಿತ್ತು.
ಅದು ಆ.14ನೇ ತಾರೀಖು. ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ. ತೆಂಕುಳಿಪಾಡಿ ಗ್ರಾಮದ ಬಾಮಿ ಕಿರಿಯ ಪ್ರಾಥಮಿಕ ಶಾಲೆಯ ಪುಟ್ಟ ಪುಟ್ಟ ಮಕ್ಕಳು ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದರು. ಆ ಮಕ್ಕಳು ಶಾಲೆಯಲ್ಲಿ ನೃತ್ಯ, ಹಾಡು ಅಭ್ಯಾಸ ಮಾಡಿದ್ದರು. ಸಮವಸ್ತ್ರ ಧರಿಸಿ ಕೊನೆಯ ಅಭ್ಯಾಸಕ್ಕಾಗಿ ಮನೆಯಿಂದ ಶಾಲೆಯತ್ತ ಹೊರಟ್ಟಿದ್ದರು. ಆದರೆ, ಆ ಮುಗ್ಧ ಕಂದಮ್ಮಗಳು ಶಾಲೆ ತಲುಪಿರಲಿಲ್ಲ. ದುರಂತವೆಂದರೆ, ಆ ಮಕ್ಕಳು ಶವವಾಗಿ ಮರಳಿ ಮನೆಗೆ ಬಂದಿದ್ದರು.
2008ರಲ್ಲಿ ನಡೆದಿದ್ದ ದುರ್ಘಟನೆಯಲ್ಲಿ ಬಾಮಿ ಶಾಲೆಗೆ ಸೇರಿದ ವಾಹನ ಚಾಲಕ ಬದ್ರುದ್ದೀನ್(28), ವಿದ್ಯಾರ್ಥಿಗಳಾದ ಮೊಹ್ಸಿರ್ (4) ಫಾತಿಮತುಲ್ ಮೊಹ್ಸಿನಾ (6), ಆಯಿಷಾ ಸುಹಾನ (6), ಸಮ್ರಿನಾ (10), ಅಫ್ಝಲ್ ರಹ್ಮಾನ್ (7), ಮುಹಮ್ಮದ್ ಹಫೀಝ್ (6), ಹಸೀನಾ (8) ಕೊನೆಯುಸಿರೆಳೆದಿದ್ದರು. ಜೊತೆಗೆ ಅಂದು ಬಸ್ ಇಲ್ಲದ ಕಾರಣ ಮಿನಿ ಶಾಲೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಾರಮ್ಮ (40) ರಮ್ಲತ್ (19), ಕಮಲಾಕ್ಷ (33) ಕೂಡ ಸಾವಿಗೀಡಾಗಿದ್ದರು.